ನಾಳೆಯಿಂದ ದಾಸೋಹ ಸಂಸ್ಕೃತಿ ಉತ್ಸವ: ಗುರುಮೂರ್ತಿ

| Published : Mar 24 2024, 01:33 AM IST / Updated: Mar 24 2024, 01:34 AM IST

ಸಾರಾಂಶ

ಬಸವಾದಿ ಶಿವಶರಣರ ತತ್ವ-ಸಿದ್ಧಾಂತ ಮತ್ತು ಆಶಯದಂತೆ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಿಂದ ಮಾರ್ಚ್ ೨೫ ರಿಂದ ೨೯ರವರೆಗೆ ಪ್ರಥಮ ಬಾರಿಗೆ ದಾಸೋಹ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಜಗಳೂರಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ಬಸವಾದಿ ಶಿವಶರಣರ ತತ್ವ-ಸಿದ್ಧಾಂತ ಮತ್ತು ಆಶಯದಂತೆ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಿಂದ ಮಾರ್ಚ್ ೨೫ ರಿಂದ ೨೯ರವರೆಗೆ ಪ್ರಥಮ ಬಾರಿಗೆ ದಾಸೋಹ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.

ಪಟ್ಟಣದ ಎಂ.ಆರ್. ಕಂಫರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ದೇವರ ಸಾನ್ನಿಧ್ಯದಲ್ಲಿ ೨೫ರಂದು ಷಟ್‌ಸ್ಥಲ ಧ್ವಜಾರೋಹಣದೊಂದಿಗೆ ಉತ್ಸವವನ್ನು ಹಿರಿಯ ಪತ್ರಕರ್ತ ಚಿತ್ರದುರ್ಗದ ಜಿ.ಎಸ್. ಉಜ್ಜಿನಪ್ಪ ಉದ್ಘಾಟಿಸುವರು. ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸುವರು. 2ನೇ ದಿನ ಈ ನಾಡಿನ ಹಿರಿಯ ಮಠಾಧೀಶರಾದ ಚಿತ್ರದುರ್ಗದ ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ಶರಣತತ್ವ ಚಿಂತನಾ ಸಮಾವೇಶ ನಡೆಯಲಿದೆ ಎಂದರು.

ಮೂರನೇ ದಿನ ರೈತ ಸಮಾವೇಶ ನಡೆಯಲಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಶೀಘ್ರ ಅನುಷ್ಠಾನ ಮತ್ತು ೫೭ ಕೆರೆಗಳ ನೀರು ತುಂಬಿಸುವ ಕುರಿತಾಗಿ ಹಕ್ಕೊತ್ತಾಯ ಸಮಾವೇಶ ಉದ್ದೇಶ. ತಾಲೂಕಿನ ಹಿರಿಯ ನೀರಾವರಿ ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಯ ಪ್ರಮುಖ ರೈತ ಹೋರಾಟಗಾರರು ಸೇರಿದಂತೆ ೫೦೦ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

4ನೇ ದಿನ ಉಚಿತ ಆರೋಗ್ಯ ತಪಾಸನೆ ಬೃಹತ್ ಸಮಾವೇಶ ನಡೆಯಲಿದೆ. ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರ ತಂಡ ವಿವಿಧ ಕಾಯಿಲೆಗಳ ತಪಾಸಣೆ ನಡೆಸಿ, ತಮ್ಮ ಕೈಲಾದಮಟ್ಟಿಗೆ ಔಷಧೋಪಚಾರ ಮಾಡಲಿದ್ದಾರೆ. ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಕುಟುಂಬದ ಕಲ್ಯಾಣ ಇಲಾಖೆ ಶಿಬಿರಕ್ಕೆ ಕೈ ಜೋಡಿಸಿವೆ ಎಂದರು.

ಮಾ.೨೯ರಂದು ಸರ್ವಶರಣರ ಬಹುತ್ವ ಸಮಾವೇಶ ನಡೆಯಲಿದೆ. ಸಮಾವೇಶ ಸಾನ್ನಿಧ್ಯವನ್ನು ಉತ್ತರ ಕರ್ನಾಟಕದ ಪ್ರಸಿದ್ಧ ಬಸವ ದಾಸೋಹಿ ಮಠವಾದ ಇಲಕಲ್ ಚಿತ್ತರಗಿ ಮಹಾಸಂಸ್ಥಾನದ ಶ್ರೀ ಗುರು ಮಹಾಂತ ಸ್ವಾಮೀಜಿ ವಹಿಸುವರು. ಐದು ದಿನದ ದಾಸೋಹ, ಸಂಸ್ಕೃತಿ ಉತ್ಸವದಲ್ಲಿ ಅನ್ನದಾಸೋಹ, ಜ್ಞಾನದಾಸೋಹ, ಅರಿವು- ಆರೋಗ್ಯ ದಾಸೋಹದ ಜೊತೆಗೆ ವಿವಿಧ ಶರಣ ಕವಿ ತಂಡಗಳಿಂದ ವಚನ ಗಾಯನ ದಾಸೋಹ ಕೂಡ ನಡೆಯಲಿದೆ ಎಂದರು.

ಈ ಕಾರ್ಯಕ್ರಮದ ಐದು ದಿನಗಳಲ್ಲೂ ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಶ್ರೀಐಮಡಿ ಶರಣಾರ್ಯರ ಗೌರವ ಉಪಸ್ಥಿತಿ ಇರಲಿದೆ. ದೊಣೆಹಳ್ಳಿಯ ಭಕ್ತರು, ಶರಣ ಪರಂಪರೆಯ ವಿವಿಧ ಮಠದ ಮುಖಂಡರು ಉತ್ಸವದ ಯಶಸ್ವಿಗೆ ಹೆಗಲು ಕೊಟ್ಟಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ಬಸವರಾಜಪ್ಪ, ಆರ್.ನಿಂಗಪ್ಪ, ವೈ.ಎಸ್. ಸಂತೋಷ್‌ಕುಮಾರ್, ಗಣೇಶ್, ನಾಗಲಿಂಗಪ್ಪ ಇತರರಿದ್ದರು.

- - - -23--1:

ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.