ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಅಡಿಕೇಶ್ವರ, ಮಡಿಕೇಶ್ವರ, ಉಳವಿ ಚೆನ್ನಬಸವೇಶ್ವರ, ಹರ-ಹರ ಮಹಾದೇವ...! ಇದು ಉಳವಿ ಚೆನ್ನಬಸವಣ್ಣನ ಜಾತ್ರೆಗೆ ಹೋಗುವ ಭಕ್ತರ ಘೋಷಣೆ.
ನಾಡಿನ ಪ್ರಖ್ಯಾತ ಜಾತ್ರೆಗಳಲ್ಲಿ ಒಂದಾದ ಉಳವಿ ಚೆನ್ನಬಸವಣ್ಣನವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಫೆ. 13ರಂದು ನಡೆಯಲಿರುವ ಜಾತ್ರೆಗೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಹೋಗುತ್ತಿದ್ದು, ದಾರಿಗುಂಟ ಭಕ್ತರಿಂದಲೇ ಭಕ್ತರಿಗೋಸ್ಕರ ದಾಸೋಹ ಸೇವೆ ಭಕ್ತಿಯಂದ ನಡೆಯುತ್ತಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಉಳವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕಿತ್ತೂರು, ಬೈಲಹೊಂಗಲ, ಸವದತ್ತಿ, ಬಾಗಲಕೋಟ, ವಿಜಯಪೂರ ಹೀಗೆ ಉತ್ತರ ಕರ್ನಾಟಕದಿಂದಲೇ ಇದ್ದಾರೆ. ಉಳವಿಗೆ ಜಾತ್ರೆಯ ನಿಮಿತ್ತ ಒಂದು ತಿಂಗಳ ಮುಂಚೆಯೇ ಉಳವಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಅಲ್ಲಿಯೇ ಉಳಿದು ಅತ್ಯದ್ಭುತ ಜಾತ್ರೆ ಮಾಡುತ್ತಾರೆ. ಅದು ಪಾದಯಾತ್ರೆ ಇರಬಹುದು, ಚಕ್ಕಡಿಗಳ ಮೂಲಕ ಇರಬಹುದು. ಈಗಾಗಲೇ ಚಕ್ಕಡಿ ಹಾಗೂ ಟ್ರಾಕ್ಟರ್‌ಗಳ ಮೂಲಕ ಸಾವಿರಾರು ಭಕ್ತರು ಉಳವಿ ತಲುಪಿದ್ದಾರೆ. ಕಾರು-ಬೈಕು ಹೀಗೆ ಲಕ್ಷಾಂತರ ಭಕ್ತರು ಹತ್ತಾರು ದಿನಗಳ ಕಾಲ ಜಾತ್ರೆ ಮಾಡುವುದು ಇಲ್ಲಿಯ ಸಂಪ್ರದಾಯ.
ಬಹುತೇಕರು ಧಾರವಾಡ ಮೂಲಕವೇ ಹಳಿಯಾಳ-ದಾಂಡೇಲಿ-ಜೋಯಿಡಾ ಮೂಲಕ 110 ಕಿಮೀ ದೂರದ ಉಳವಿ ತಲುಪಬೇಕು. ಮರಳಿ ಇದೇ ಮಾರ್ಗವಾಗಿಯೂ ಬರಬೇಕು. ಧಾರವಾಡದಿಂದ 10 ಕಿಮೀ ಸಾಗಿದರೆ ಅರಣ್ಯ ಶುರುವಾಗುತ್ತದೆ. ಚಕ್ಕಡಿ-ಟ್ರ್ಯಾಕ್ಟರ್, ಪಾದಯಾತ್ರಿಗಳು ತಕ್ಕಮಟ್ಟಿಗೆ ಆಹಾರದ ವ್ಯವಸ್ಥೆ ಮಾಡಿಕೊಂಡಿದ್ದರೂ ಭಕ್ತರಿಗೋಸ್ಕರ ಭಕ್ತರು ಶುರು ಮಾಡಿದ ದಾಸೋಹ ಸೇವೆ ಇತ್ತೀಚಿನ ವರ್ಷಗಳಲ್ಲಿ ಹೆಜ್ಜೆ ಹೆಜ್ಜೆಗೂ ಶುರುವಾಗಿದೆ. ಧಾರವಾಡ-ಹಳಿಯಾಳ-ದಾಂಡೇಲಿ ಮಧ್ಯೆ 50 ಕಿಮೀ ಅಂತರವಿದ್ದು 8ರಿಂದ 10 ಕಡೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಊಟ, ಉಪಾಹಾರ, ನೀರು, ಹಣ್ಣು, ತಂಪು ಪಾನೀಯಗಳನ್ನು ಭಕ್ತರಿಗೆ ವಿತರಿಸುವ ಪುಣ್ಯದ ಕಾರ್ಯ ನಡೆಯುತ್ತಿದೆ.ಸ್ವಯಂ ಪ್ರೇರಣೆಯ ದಾಸೋಹ:
ಧಾರವಾಡ ಮಾರ್ಗವಾಗಿ ಇರುವ ಅನೇಕ ದಾಸೋಹ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತವಾಗಿ ಸ್ಥಳೀಯ ಭಕ್ತರು, ವ್ಯಾಪಾರಸ್ಥರು ತಮ್ಮ ಉಳಿಕೆ ಹಣದಿಂದಲೇ ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಉಪಾಹಾರಕ್ಕೆ ಉಪ್ಪಿಟ್ಟು, ಚುರುಮರಿ, ಅವಲಕ್ಕಿ, ಚಹಾ ಹಾಗೂ ಊಟಕ್ಕೆ ಅನ್ನ, ಸಾರು, ಶಿರಾ, ಗೋದಿ ಹುಗ್ಗಿ, ಪಲಾವ್ ದಾಸೋಹ ಮಾಡಿಕೊಂಡಿದ್ದರೆ, ಕೆಲವರು ಮಧ್ಯಾಹ್ನದ ಬಿಸಿಲಿಗೆ ಮಜ್ಜಿಗೆ, ನೀರು, ಕಲ್ಲಂಗಡಿ ಹಣ್ಣುಗಳನ್ನು ಸಹ ಭಕ್ತರಿಗೆ ಕೊಡ ಮಾಡುತ್ತಿರುವುದು ದಾಸೋಹ ಪರಂಪರೆಗೆ ಮತ್ತಷ್ಟು ಜೀವ ತುಂಬಿದಂತಾಗಿದೆ.ಬರೀ ದಾಸೋಹ ಸೇವೆ ಮಾತ್ರವಲ್ಲದೇ, ತಡರಾತ್ರಿ ಪಾದಯಾತ್ರಿಗಳಿಗೆ ವಸತಿ, ಸ್ನಾನದ ವ್ಯವಸ್ಥೆಗಳನ್ನು ಸಹ ಮಾಡಿಕೊಂಡಿದ್ದು ಅವರ ಭಕ್ತಿಯನ್ನು ತೋರಿಸುತ್ತಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಎತ್ತುಗಳಿಗೆ ಮೇವು, ಪಾದಯಾತ್ರೆಗಳಿಗೆ ಕಾಲಿಗೆ ಕೊಬ್ಬರಿ ಎಣ್ಣೆ ಸಹ ಒದಗಿಸಲಾಗುತ್ತಿದೆ ಎಂದು ಹಳಿಯಾಳದ ಸುಮಂಗಲಾ ಚಂದ್ರಕಾಂತ ಅಂಗಡಿ ಅವರ ಚಂದಾವನ ಹೆಸರಿನ ಬಯಲಿನಲ್ಲಿ ತಾತ್ಕಾಲಿಕ ಟೆಂಟ್ ಹಾಕಿ ದಾಸೋಹ ಮಾಡುತ್ತಿರುವ ಶಿವಾನಂದ ದೇವಗಿರಿ, ಸಂಜೀವ ಲಕಮನಹಳ್ಳಿ, ಶಿವಪುತ್ರಪ್ಪ ಭಾವಿಕಟ್ಟಿ, ಸರಸ್ವತಿ ಪೂಜಾರ ಅವರ ತಂಡವು ಕನ್ನಡಪ್ರಭಕ್ಕೆ ಮಾಹಿತಿ ನೀಡಿತು.
ಬರುವಾಗ ನಿಗದಿ ದಾಸೋಹ:ನಿಗದಿ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಉಳವಿಯಲ್ಲಿ ರಥೋತ್ಸವ ಹೊರಡುತ್ತಿದ್ದಂತೆ ಗ್ರಾಮದಲ್ಲಿ ಅನ್ನ ದಾಸೋಹ ಶುರುವಾಗುತ್ತದೆ. ಉಳವಿಯಿಂದ ಮರಳಿ ಬರುವ ಚಕ್ಕಡಿ ಹಾಗೂ ಪಾದಯಾತ್ರಿಗಳಿಗೆ ನಿರಂತರವಾಗಿ ಐದು ದಿನ ದಾಸೋಹ ಇರುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.
ಪಾದಯಾತ್ರೆ ಹಾಗೂ ಚಕ್ಕಡಿ ಮೂಲಕ ಹೋಗುವವರಿಗೆ ಉಳವಿ ಮುಟ್ಟಲು ಧಾರವಾಡದಿಂದ ಕನಿಷ್ಠ ಮೂರರಿಂದ ನಾಲ್ಕು ದಿನ ಬೇಕು. ಈ ಹಿನ್ನೆಲೆಯಲ್ಲಿ ದಾರಿ ಮಧ್ಯೆ ನಡೆಯುತ್ತಿರುವ ದಾಸೋಹ ವರ್ಷದಿಂದ ವರ್ಷಕ್ಕೆ ಇಮ್ಮಡಿಯಾಗುತ್ತಿದ್ದು, ಭಕ್ತರ ಸಂಖ್ಯೆಯೂ ದುಪ್ಪಟ್ಟಾಗಿದೆ.ಸುಮಾರು ಎಂಟತ್ತು ಗೆಳೆಯರ ಬಳಗದಿಂದ ಪಾದಯಾತ್ರೆ ಮೂಲಕ ಜಾತ್ರೆಗೆ ಹೋಗುತ್ತೇವೆ. ದಾರಿ ಮಧ್ಯೆ ನಮಗೆ ಭಕ್ತರು ನೀಡುವ ದಾಸೋಹ ಸೇವೆ ಅನನ್ಯ. ಹೀಗಾಗಿ ಮೂರು ವರ್ಷಗಳ ಕಾಲ ಹೋಗಬೇಕು ಎಂದುಕೊಂಡವರಿಗೆ ಈ ವರ್ಷದ ಜಾತ್ರೆ 6ನೇಯದ್ದು. ದಾಸೋಹಿಗಳ ಕಾರ್ಯ ಶ್ಲಾಘನೀಯ ಎಂದು ಕುಂದಗೋಳ ತಾಲೂಕಿನ ಶಿರೂರ ಗೆಳೆಯರ ಬಳಗ ಹೇಳಿದೆ.