ಸಾರಾಂಶ
ಡಾ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಒಟ್ಟು 114 ತಾಲೂಕುಗಳ ಅಭಿವೃದ್ಧಿಗೆ ನೀಡಿದ ಅನುದಾನ ಬಳಸಿ ತಾಲೂಕುಗಳು ಅಭಿವೃದ್ಧಿ ಆಗಿವೆಯೇ, ಇಲ್ಲವೆ ಎಂಬುದನ್ನು ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸುಗಳ ವರದಿಯನ್ನು ನೀಡಲಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರಾದೇಶಿಕ ಅಸಮತೋಲ ಕುರಿತು ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಿ ಮುಂದಿನ ಸೆಪ್ಟೆಂಬರ್ ವೇಳೆಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ತಿಳಿಸಿದರು.ಜಿಲ್ಲಾಡಳಿತ ಭವನದ ಸರ್ ಎಂವಿ ಸಭಾಂಗಣದಲ್ಲಿ ಗುರುವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂವಾದ ಸಭೆ ಹಾಗೂ ಸಾರ್ವಜನಿಕರ ಸಲಹೆ, ಬೇಡಿಕೆಗಳ ಸ್ವೀಕಾರದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡಾ.ನಂಜುಂಡಪ್ಪ ವರದಿ ಶಿಫಾರಸುಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ 2002ರಲ್ಲಿ ಡಾ.ಡಿ.ಎಂ.ನಂಜುಂಡಪ್ಪ ನವರು 35 ಸೂಚ್ಯಂಕಗಳನ್ನು ಪರಿಶೀಲಿಸಿ 1200 ಪುಟಗಳ ವರದಿಯನ್ನು ಅಂದಿನ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ವರದಿಯಲ್ಲಿ ಹಿಂದುಳಿದ ಒಟ್ಟು 114 ತಾಲೂಕುಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ವಿಶೇಷ ಅನುದಾನವನ್ನು ವಿನಿಯೋಗಿಸುವಂತೆ ಸಲಹೆ ನೀಡಲಾಗಿತ್ತು. ಈ ವಿಶೇಷ ಅನುದಾನದ ಪೈಕಿ ಗುಲ್ಬರ್ಗ ವಿಭಾಗಕ್ಕೆ ಶೇ.40ರಷ್ಟು, ಬೆಂಗಳೂರು ವಿಭಾಗಕ್ಕೆ ಶೇ.25 ರಷ್ಟು, ಬೆಳಗಾಂ ವಿಭಾಗಕ್ಕೆ ಶೇ.20 ರಷ್ಟು ಹಾಗೂ ಮೈಸೂರು ವಿಭಾಗಕ್ಕೆ ಶೇ15 ರಷ್ಟು ವೆಚ್ಚ ಮಾಡುವಂತೆ ಸೂಚಿಸಿತ್ತು.
ಈ ಪೈಕಿ ಈ ವರೆಗೆ 35 ಸಾವಿರ ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಹೀಗೆ ವೆಚ್ಚ ಮಾಡಲಾಗಿರುವ ಅನುದಾನದಿಂದ ಹಾಗೂ ಅನುಷ್ಠಾನ ಮಾಡಿರುವ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಆಗಿವೆಯೇ, ಇಲ್ಲವೆ ಎಂಬುದನ್ನು ಅಧ್ಯಯನ ಮಾಡಬೇಕು. ಹಿಂದೆ ಇದ್ದ 176 ತಾಲೂಕುಗಳ ಬದಲಾಗಿ ಈಗ ರಾಜ್ಯದಲ್ಲಿ 240 ತಾಲೂಕುಗಳಾಗಿವೆ. ಇಂತಹ ಎಲ್ಲಾ ವಿಚಾರಗಳನ್ನು ಅವಲೋಕನ ಮಾಡಿ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಏನೆಲ್ಲ ಯುಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತ ಶಿಪಾರಸು ಮಾಡಲು ಸರ್ಕಾರ ಈ ಸಮಿತಿ ರಚಿಸಿದೆ ಎಂದರು.ಕ್ಷೇತ್ರಗಳ ಪರಿಸ್ಥಿತಿಯ ಮಾಹಿತಿ
ಸಮಿತಿಯು ಮುಖ್ಯವಾಗಿ ತಲಾದಾಯ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಸೂಚ್ಯಂಕಗಳನ್ನು ಪರಿಗಣಿಸಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಚಿಕ್ಕಬಳ್ಳಾಪುರ ಭಾಗದಲ್ಲಿ ನೀರಾವರಿ ಸಮಸ್ಯೆಗೆ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕಾ ಬೆಳೆಗಳ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.ನಿಜಾಮರ ಕಾಲದಲ್ಲಿ ಕಡೆಗಣನೆ
ಪ್ರಾದೇಶಿಕ ಅಸಮತೋಲಕ್ಕೆ ಕಾರಣವೇನು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಯಾದಾಗ ಅಂದಿನ ಮೈಸೂರು ಪ್ರಾಂತ್ಯದ ಜಿಲ್ಲೆಗಳು ಸಾಕಷ್ಟು ಅಭಿವೃದ್ದಿ ಕಂಡಿದ್ದವು. ನಿಜಾಮರ ಅಳ್ವಿಕೆಗೆ ಬಳಪಟ್ಟಿದ್ದ ಇಂದಿನ ಕಲ್ಯಾಣ ಕರ್ನಾಟಕದ ಭಾಗಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿತ್ತು. ಇದನ್ನು ಮನಗಂಡ ಅಂದಿನ ಸರ್ಕಾರ ಡಾ. ನಂಜುಂಡಪ್ಪ ರವರನ್ನು ಪ್ರಾದೇಶಿಕ ಅಸಮತೋಲನ ನಿವಾರಣೆಯ ಬಗ್ಗೆ ಅಧ್ಯಯನ ಮಾಡಲು ನೇಮಕ ಮಾಡಿತ್ತು ಎಂದರು. ಈ ಸಂದರ್ಭದಲ್ಲಿ ಆರ್ಥಿಕ ಮತ್ತು ಯೋಜನಾ ಇಲಾಖೆ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ಆರ್. ವಿಶಾಲ್, ಸದಸ್ಯರಾದ ಡಾ. ಸಿದ್ದಪ್ಪ ಟಿ ಬಾಗಲಕೋಟೆ, ಕೆ.ಎನ್ ಸಂಗೀತಾ ಕಟ್ಟಿಮನಿ, ಡಾ ಎಂ.ಎಚ್ ಸೂರ್ಯನಾರಾಯಣ್, ಯೋಜನಾ ಇಲಾಖೆಯ ನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಮತ್ತಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.