ಸಾರಾಂಶ
ಕಳೆಗುಂದಿದ ಯಾತ್ರೆ । ಮಹಿಳೆಯರಿಗಿಂತ ಪೊಲೀಸರ ಸಂಖ್ಯೆ ದುಪ್ಪಟ್ಟು। ಇಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಆಯೋಜಿಸಿರುವ ಮೂರು ದಿನಗಳ ದತ್ತ ಜಯಂತಿ ಉತ್ಸವದ ಮೊದಲನೇ ದಿನವಾದ ಭಾನುವಾರ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದ್ದರೆ, ಪೊಲೀಸರ ಸಂಖ್ಯೆ ದುಪ್ಪಟ್ಟಾಗಿತ್ತು. ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಪೂರ್ವ ನಿಗದಿಯಂತೆ ಬೆಳಿಗ್ಗೆ 9.30 ಕ್ಕೆ ಸಂಕೀರ್ತನಾ ಯಾತ್ರೆ ಹೊರಡಬೇಕಾಗಿತ್ತು. ಆದರೆ, ನಿರೀಕ್ಷೆಯಂತೆ ಹೊರ ಜಿಲ್ಲೆ ಮಾತ್ರವಲ್ಲ, ಚಿಕ್ಕಮಗಳೂರು ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ಮಹಿಳೆಯರು ಆಗಮಿಸಲಿಲ್ಲ. ಬೆಳಿಗ್ಗೆ 10.25 ರ ವೇಳೆಗೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯಾತ್ರೆಗೆ ಚಾಲನೆ ನೀಡಿದರು. ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಬಿಜೆಪಿ ಮುಖಂಡರು, ಮಹಿಳೆಯರು ಯಾತ್ರೆಯಲ್ಲಿ ಹೊರಟರು. ಸಂಕೀರ್ತನಾ ಯಾತ್ರೆ ಕೆ.ಎಂ. ರಸ್ತೆ, ರತ್ನಗಿರಿ ರಸ್ತೆ ಮೂಲಕ ಶ್ರೀ ಕಾಮಧೇನು ಗಣಪತಿ ದೇವಾಲಯದ ಬಳಿ ತೆರಳಿ ಬಳಿಕ ಮಹಿಳೆಯರು ವಾಹನ ಗಳಲ್ಲಿ ದತ್ತಪೀಠಕ್ಕೆ ತೆರಳಿದರು. ದತ್ತಪೀಠದಲ್ಲಿ ಸರದಿ ಸಾಲಿನಲ್ಲಿ ನಿಂತು ಮಹಿಳೆಯರು ದತ್ತ ಪಾದುಕೆಗಳ ದರ್ಶನ ಪಡೆದರು. ಪೀಠದ ಹೊರ ವಲಯದಲ್ಲಿ ಗಣಪತಿ ಹೋಮ, ದತ್ತ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.ಪೊಲೀಸರ ಸಂಖ್ಯೆ ದ್ವಿಗುಣ:ಕಳೆದ ವರ್ಷದಲ್ಲಿ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಸಂಖ್ಯೆ ಸುಮಾರು 3 ಸಾವಿರ ದಾಟಿತ್ತು. ಆದರೆ, ಈ ಬಾರಿ ಈ ಸಂಖ್ಯೆ ಒಂದು ಸಾವಿರದ ಗಡಿಯೂ ದಾಟಲಿಲ್ಲ. ಆದರೆ, ಪೊಲೀಸರ ಸಂಖ್ಯೆ ದ್ವಿಗುಣವಾಗಿತ್ತು. ಈ ಬಾರಿ ಸಂಕೀರ್ತನಾ ಯಾತ್ರೆ ಹಾಗೂ ಶೋಭಾಯಾತ್ರೆಯ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಾಗಾಗಿ ಸಂಕೀರ್ತನಾ ಯಾತ್ರೆಯಲ್ಲಿ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಸಂಕೀರ್ತನಾ ಯಾತ್ರೆ ಆರಂಭದಿಂದ ಅಂತ್ಯದವರೆಗೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಸಾಗಿದರು. ದತ್ತಪೀಠಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.
ಇಂದು ಶೋಭಾಯಾತ್ರೆ:ದತ್ತ ಜಯಂತಿ ಉತ್ಸವದ ಎರಡನೇ ದಿನವಾದ ಸೋಮವಾರ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ.ಮಧ್ಯಾಹ್ನ ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಹೊರಡಲಿರುವ ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಲ್ಲಿ ತೆರಳಿ ಆಜಾದ್ ಪಾರ್ಕ್ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ.
ಶೋಭಾಯಾತ್ರೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ---- ಬಾಕ್ಸ್ ----ಕಾನೂನಾತ್ಮಕವಾಗಿ ದತ್ತಪೀಠ ಬರಲಿದೆಚಿಕ್ಕಮಗಳೂರು: ದತ್ತಪೀಠದಲ್ಲಿ ಅಭಿವೃದ್ಧಿ ಕೆಲಸಗಳಾಗಗಿ, ಪೀಠ ಸಂಪೂರ್ಣವಾಗಿ ನಮ್ಮ ಸುಪರ್ದಿಗೆ ಬರಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಈಗ ಪೂಜೆಗೆ ಅವಕಾಶ ಸಿಕ್ಕಿರುವುದು ಸಂತೋಷ ಎಂದು ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದತ್ತಪೀಠ ನಮ್ಮದಾಗಬೇಕೆಂಬ ಭಾವನೆ ಹಿಂದುಗಳಲ್ಲಿ ಇದೆ. ಅದು ನಮ್ಮ ಜತೆ ಮತ್ತೆ ಕಾನೂನಾತ್ಮಕವಾಗಿ ಬರಲಿದೆ ಎಂದರು. ದೇಶದ ಬೇರೆ ಬೇರೆ ಭಾಗದಲ್ಲಿರುವ ದತ್ತಭಕ್ತರು, ಇಲ್ಲಿಗೆ ಬಂದು ಹೋಗಬೇಕೆಂಬ ಅಪೇಕ್ಷೆ ನಮ್ಮದಾಗಿದೆ. ದತ್ತಪೀಠ ನಮ್ಮ ಸುಪರ್ದಿಗೆ ಬರಲಿದೆ ಎಂದು ಹೇಳಿದರು. 24 ಕೆಸಿಕೆಎಂ 1ದತ್ತ ಜಯಂತಿ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಭಾನುವಾರ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಿತು. ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ. ರವಿ ಇದ್ದರು.