ಪ್ರಸ್ತುತ ದಿನಮಾನಗಳಲ್ಲಿ ದತ್ತ ಜಯಂತಿಗೆ ಹೆಚ್ಚಿನ ಮನ್ನಣೆ ಬಂದಿದೆ. ಕರ್ನಾಟಕದ ಗಾಣಿಗಾಪುರದಲ್ಲಿ ಪ್ರಾರಂಭವಾದ ದತ್ತ ಜಯಂತಿ ಇಂದು ರಾಜ್ಯಾದ್ಯಂತ ಎಲ್ಲೆಡೆ ಆಚರಿಸಲಾಗುತ್ತಿದೆ. ಹಲವಾರು ವರ್ಷಗಳ ಹಿಂದೆ ಶ್ರೀನಿರಂಜನಾನಂದ ಸರಸ್ವತಿ ಅವರು ನಿರಂಜನ ಕುಠೀರದಲ್ಲಿ ದತ್ತ ಜಯಂತಿಯನ್ನು ಪ್ರಾರಂಭ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದತ್ತ ಜಯಂತಿ ಅಂಗವಾಗಿ ನಗರದ ಹೊರ ವಲಯದಲ್ಲಿರುವ ಶ್ರೀನಿರಂಜನ ದತ್ತ ಕುಠೀರದಲ್ಲಿ ಗುರುವಾರ ಶ್ರದ್ಧಾ-ಭಕ್ತಿಯಿಂದ ದತ್ತ ಜಯಂತಿ ಆಚರಿಸಲಾಯಿತು.

ನ.೨೮ರಿಂದ ಪ್ರಾರಂಭವಾದ ಕಾರ್ಯಕ್ರಮ ದತ್ತ ಜಯಂತಿಯೊಂದಿಗೆ ಮುಕ್ತಾಯವಾಯಿತು. ಬೆಳಗಿನಿಂದಲೇ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಲಾಯಿತು. ನಂತರ ಭಜನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಸಾಂಗೋಪ ಸಾಂಗವಾಗಿ ನೆರವೇರಿತು.

ದತ್ತಪೀಠ ಟ್ರಸ್ಟ್‌ನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ದತ್ತ ಜಯಂತಿಗೆ ಹೆಚ್ಚಿನ ಮನ್ನಣೆ ಬಂದಿದೆ. ಕರ್ನಾಟಕದ ಗಾಣಿಗಾಪುರದಲ್ಲಿ ಪ್ರಾರಂಭವಾದ ದತ್ತ ಜಯಂತಿ ಇಂದು ರಾಜ್ಯಾದ್ಯಂತ ಎಲ್ಲೆಡೆ ಆಚರಿಸಲಾಗುತ್ತಿದೆ. ಹಲವಾರು ವರ್ಷಗಳ ಹಿಂದೆ ಶ್ರೀನಿರಂಜನಾನಂದ ಸರಸ್ವತಿ ಅವರು ನಿರಂಜನ ಕುಠೀರದಲ್ಲಿ ದತ್ತ ಜಯಂತಿಯನ್ನು ಪ್ರಾರಂಭ ಮಾಡಿದ್ದರು. ಅವರ ಆಶೀರ್ವಾದಿಂದ ನಾವು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಸಣ್ಣ ಪ್ರಮಾಮದಲ್ಲಿ ಪ್ರಾರಂಭವಾದ ದತ್ತ ಜಯಂತಿ ಇಂದು ಬೃಹತ್ತಾದ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗುರುವಾರ ರಾತ್ರಿ ಪೂರ್ತಾ ಅಖಂಡ ಭಜನೆ ಇರುತ್ತದೆ. ಬೆಳಗಿನ ಜಾವ ೬ ಗಂಟೆಯವರೆಗೂ ಭಜನೆ ನಿರ್ವಿಘ್ನವಾಗಿ ನಡೆಯಲಿದ್ದು, ಬೆಳಗ್ಗೆ ೭ ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ಮುಕ್ತಾಯವಾಗಲಿದೆ ಎಂದರು.

ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಶ್ರೀದತ್ತನ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕಾರ್ಯಸಿದ್ಧಿ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಹನುಮ ಜಯಂತಿ ವೈಭವ

ಮೇಲುಕೋಟೆ:

ಎಂಟು ದಿಕ್ಕುಗಳಲ್ಲಿ ಹನುಮನ ದೇವಾಲಯಗಳಿರುವ ಮೇಲುಕೋಟೆ ಕಾರ್ಯಸಿದ್ಧಿ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹನುಮಜಯಂತಿ ವೈಭವದಿಂದ ನೆರವೇರಿತು.

ಜಯಂತಿಯ ಅಂಗವಾಗಿ ವೀರಾಂಜನೇಯಸ್ವಾಮಿಗೆ ವಿವಿಧ ಬಗೆಯ ಹಣ್ಣುಗಳು ಹಾಗೂ ವಿಳೇದೆಲೆಯ ಹಾರಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣವನ್ನು ತಳಿರು-ತೋರಣಗಳಿಂದ ಅಲಂಕರಿಸಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆ ವೀರಾಂಜನೇಯಸ್ವಾಮಿಗೆ ಲೋಕ ಕಲ್ಯಾಣಾರ್ಥವಾಗಿ ಮಹಾಭಿಷೇಕ ನೆರವೇರಿಸಲಾಯಿತು. ನಂತರ ರಾಮತಾರಕ ಹೋಮ, ಅರ್ಚಕ ಚಂದುಭಾರದ್ವಾಜ್ ನೇತೃತ್ವದಲ್ಲಿ ಸನ್ನಿಧಿಯಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಹನುಮನ ಸೇವಾ ಬಳಗದಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಮೇಲುಕೋಟೆಯ ಮತ್ತೊಂದು ಪ್ರಮುಖ ಆಂಜನೇಯಗುಡಿ ಪೇಟೆ ಆಂಜನೇಯಸ್ವಾಮಿಗೆ ಮಹಾಭಿಷೇಕ ನೆರವೇರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ವಿಶೇಷ ಪುಷ್ಪಗಳಿಂದ ಸ್ವಾಮಿಯ ಅಲಂಕಾರ ಮಾಡಲಾಗಿತ್ತು. ಹೋಬಳಿಯ ಬೆಳ್ಳಾಳೆ ಮತ್ತು ಜಕ್ಕನಹಳ್ಳಿಯಲ್ಲೂ ಹನುಮ ಜಯಂತಿ ವೈಭವದಿಂದ ನೆರವೇರಿತು.