ನ. 26 ರಿಂದ ಡಿ. 4 ರವರೆಗೆ ದತ್ತ ಜಯಂತಿ ಉತ್ಸವ

| Published : Oct 26 2025, 02:00 AM IST

ಸಾರಾಂಶ

ಚಿಕ್ಕಮಗಳೂರುದತ್ತಮಾಲೆ ಹಾಗೂ ದತ್ತಜಯಂತಿ ನ.26 ರಿಂದ ಡಿ.4 ರವರೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಎಸ್.ಆರ್ ಪ್ರಭಂಜನ್ ಹೇಳಿದರು.

- ಡಿ. 3 ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ,

--

- ಸುಮಾರು 25 ಸಾವಿರ ದತ್ತಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆ

- ಆಜಾದ್ ಪಾರ್ಕ್ ವೃತ್ತದಲ್ಲಿ ನಡೆಯುವ ಧಾರ್ಮಿಕ ಸಭೆ

- ಮಹಿಳೆಯರಿಂದ ಸಂಕೀರ್ತನಾ ಯಾತ್ರೆ

- ದಶಸಹಸ್ರ ಸಂಖ್ಯೆಯಲ್ಲಿ ರುದ್ರಾಹೋಮ, ಶ್ರೀ ದತ್ತಾತ್ರೇಯ ಮಹಾಮಂತ್ರ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದತ್ತಮಾಲೆ ಹಾಗೂ ದತ್ತಜಯಂತಿ ನ.26 ರಿಂದ ಡಿ.4 ರವರೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಎಸ್.ಆರ್ ಪ್ರಭಂಜನ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದತ್ತಜಯಂತಿ ನಾಡ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಸಾಧು-ಸಂತರು, ಮಾತೆಯರು, ದತ್ತ ಮಾಲಾಧಾರಿಗಳು, ದತ್ತಭಕ್ತರು ಸೇರಿದಂತೆ ರಾಜ್ಯಾದ್ಯಂತ ಸುಮಾರು 25 ಸಾವಿರ ದತ್ತಮಾಲಾಧಾರಿಗಳು ಆಗಮಿಸಲಿದ್ದಾರೆಂದು ಹೇಳಿದರು.

ದತ್ತಪೀಠದಲ್ಲಿ ಹೈಕೋರ್ಟ್ ನಿರ್ದೇಶನದ ಅನುಸಾರ ಹೋಮ ಹವನ ಪೂಜೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದತ್ತಜಯಂತಿ ಉತ್ಸವ ನಡೆಯಲಿದೆ. ಡಿ.3 ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಭಾಗವಹಿಸಲಿದ್ದಾರೆಂದರು.

ಡಿ.2 ರಂದು ಅನುಸೂಯ ದೇವಿ ಪೂಜೆ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಸಭೆ ನಂತರ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಬೆಳಗ್ಗೆ 9.30 ಕ್ಕೆ ನಡೆಯಲಿದೆ. ಇದೇ ದಿನ ದತ್ತಪೀಠದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಹವಾಚನ, ಪಂಚಗವ್ಯ ಶುದ್ಧಿ, ಋತ್ವಗ್ವರ್ಣ, ಗಣಪತಿ ಹೋಮ, ಚಂಡಿಕಾ ಪಾರಾಯಣ, ದುರ್ಗಾ ಹೋಮ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದತ್ತಪೀಠದಲ್ಲಿ ಸಂಜೆ ಪಾದುಕಾ ಶುದ್ಧಿ, ಪ್ರಕಾರ ಶುದ್ಧಿ, ವಾಸ್ತುರಾಕ್ಷೆಜ್ಞ ಹೋಮ, ಸುದರ್ಶನ ಹೋಮ, ದುರ್ಗಾದೀಪ ನಮಸ್ಕಾರ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಹೇಳಿದರು.

ಡಿ.3 ರಂದು ದತ್ತಪೀಠದಲ್ಲಿ ನವಕಲಶ ಕಲಾವಾಹನಂ, ಕಲಾತತ್ವಾದಿ ವಾಸ ಪೂಜೆ, ಕಲಾಹೋಮ, ಕಲಶಾಭಿಷೇಕ ಮಹಾಪೂಜೆ ನಡೆಯಲಿದೆ. ಇದೇ ದಿನ ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ಡಿ.4 ರಂದು ದತ್ತಪೀಠದಲ್ಲಿ ದತ್ತಾತ್ರೇಯ ಜಯಂತಿ ಅಂಗವಾಗಿ ದಶಸಹಸ್ರ ಸಂಖ್ಯೆಯಲ್ಲಿ ರುದ್ರಾಹೋಮ, ಶ್ರೀ ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನ, ಪ್ರಸಾದ ವಿನಿ ಯೋಗ ಹಾಗೂ ದತ್ತಜಯಂತಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ದತ್ತಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ ಅವರು, ದತ್ತಜಯಂತಿ ಆಚರಣೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿನಂತಿಸಿದರು.ಸುದ್ಧಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಮುಖಂಡರಾದ ಮಹಿಪಾಲ್, ಆರ್.ಡಿ. ಮಹೇಂದ್ರ, ಯೋಗೀಶ್ ರಾಜ್ ಅರಸ್, ಶ್ಯಾಮ್ ವಿ. ಗೌಡ ಉಪಸ್ಥಿತರಿದ್ದರು.25 ಕೆಸಿಕೆಎಂ 1ದತ್ತಪೀಠದ ವಿಹಂಗಮ ನೋಟ.