ದತ್ತಮಾಲಾ ಅಭಿಯಾನ<bha>;</bha> ಶೋಭಾಯಾತ್ರೆಗೆ ಶಾಂತಿಯುತ ತೆರೆ

| Published : Nov 06 2023, 12:45 AM IST

ದತ್ತಮಾಲಾ ಅಭಿಯಾನ<bha>;</bha> ಶೋಭಾಯಾತ್ರೆಗೆ ಶಾಂತಿಯುತ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ದತ್ತಮಾಲಾ ಅಭಿಯಾನ; ಶೋಭಾಯಾತ್ರೆಗೆ ಶಾಂತಿಯುತ ತೆರೆ

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ದತ್ತಭಕ್ತರು, ಕ್ಷೀಣಿಸಿದ ದತ್ತಮಾಲಾಧಾರಿಗಳ ಸಂಖ್ಯೆ,ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀರಾಮ ಸೇನೆ ಈ ಬಾರಿ ಹಮ್ಮಿಕೊಂಡಿದ್ದ 20ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಭಾನುವಾರ ಶಾಂತಿಯುತವಾಗಿ ತೆರೆ ಬಿದ್ದಿತು.

ಚಿಕ್ಕಮಗಳೂರು ನಗರದಲ್ಲಿ ನಡೆದ ಶೋಭಾಯಾತ್ರೆ, ದತ್ತಪೀಠದಲ್ಲಿ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರಿದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಇಳಿಮುಖ ವಾಗಿತ್ತು.

ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಂಕರಮಠ ಮುಂಭಾಗದಲ್ಲಿ ಬೆಳಿಗ್ಗೆ ಧರ್ಮ ಸಭೆ ನಡೆಯಿತು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್, ಯೋಗಿ ಸಂಜೀತ್ ಸುವರ್ಣ, ವಿವೇಕ್‌ನಾಥ್, ರಂಜಿತ್ ಶೆಟ್ಟಿ, ಅನಿಲ್ ಆನಂದ್, ನವೀನಾ ರಂಜಿತ್ ಪಾಲ್ಗೊಂಡಿದ್ದರು.

ಬಳಿಕ ಹಾಸನ, ದಾವಣಗೆರೆ, ಕೋಲಾರ, ಬೆಂಗಳೂರು, ಹುಬ್ಬಳ್ಳಿ, ಧಾರಾವಾಡ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ದತ್ತಭಕ್ತರು ಬಸವನಹಳ್ಳಿ ರಸ್ತೆಯ ಮೂಲಕ ಶೋಭಾಯಾತ್ರೆಯಲ್ಲಿ ತೆರಳಿದರು. ಹನುಮಂತಪ್ಪ ವೃತ್ತ ಬಳಸಿ ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ ಆಜಾದ್ ವೃತ್ತದಲ್ಲಿ ಮುಕ್ತಾಯಗೊಂಡಿತು.

ನಾಸಿಕ್‌ ಡೋಲ್ ಸದ್ದಿಗೆ ದತ್ತಭಕ್ತರು ಭಗವಾದ್ಜಗಳನ್ನು ಹಿಡಿದು ಭಕ್ತಿಪೂರ್ವಕವಾಗಿ ಹೆಜ್ಜೆ ಹಾಕಿದರು. ಕೋಲಾರದಿಂದ ಬಂದಿದ್ದ ಭಕ್ತರೊಬ್ಬರು ಬೃಹತ್ ಧ್ವಜವನ್ನು ಹಿಡಿದು ಸಾಗಿದರು. ಶ್ರೀರಾಮಸೇನೆಯ ಕರ್ನಾಟಕ ದತ್ತಮಾಲಾ ಅಭಿಯಾನದ ಬ್ಯಾನರ್ ಹಿಡಿದು ಮುನ್ನೆಡೆದರು.

ಪುಷ್ಪಾಲಂಕೃತಗೊಂಡ ತೆರೆದ ವಾಹನದಲ್ಲಿ ದತ್ತಾತ್ರೇಯರ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಾಣಗಳ ಬತ್ತಳಿಕೆಯನ್ನು ಹೆಗಲಮೇರಿಸಿಕೊಂಡು, ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ನಿಂತಿದ್ದ ಶ್ರೀರಾಮನ ಬೃಹತ್‌ಮೂರ್ತಿ ನೋಡುಗರ ಗಮನ ಸೆಳೆಯಿತು.

ಆಜಾದ್ ವೃತ್ತದಲ್ಲಿ ದತ್ತಾತ್ರೇಯರ ವಿಗ್ರಹ ಮತ್ತು ಶ್ರೀರಾಮನ ಮೂರ್ತಿ ಅಕ್ಕಪಕ್ಕದಲ್ಲಿ ನಿಂತಿದ್ದಾಗ ಮಹಿಳೆಯರಾದಿಯಾಗಿ ದತ್ತಭಕ್ತರು ಸೆಲಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಳಿಕ ದತ್ತಭಕ್ತರು ತಾವು ಆಗಮಿಸಿದ್ದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು.

ದತ್ತಪೀಠದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ದತ್ತ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು. ನಂತರ ದತ್ತಪೀಠದ ಹೊರ ವಲಯದಲ್ಲಿ ನಿರ್ಮಾಣ ಮಾಡಲಿರುವ ಶೆಡ್‌ನಲ್ಲಿ ಸತ್ಯದತ್ತ ವ್ರತ, ದತ್ತಹೋಮ, ಪೂರ್ಣಾಹುತಿಯ ನಂತರ ದತ್ತಭಕ್ತರು ಊರುಗಳಿಗೆ ವಾಪಸ್ ತೆರಳಿದರು.

ಈ ಬಾರಿ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿತು.

ಮಳೆ : ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೋಡ, ಕೆಲವೆಡೆ ಮಳೆಯ ವಾತಾವರಣ ಇತ್ತು. ಭಾನುವಾರ ದತ್ತಪೀಠ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆ ಬಂದಿತು.

ಈ ಮಳೆಯಲ್ಲಿಯೇ ದತ್ತಭಕ್ತರು, ಸರದಿ ಸಾಲಿನಲ್ಲಿ ನಿಂತು ದತ್ತ ಪಾದುಕೆಗಳ ದರ್ಶನ ಪಡೆದರು. ದತ್ತಭಕ್ತರು ಪೀಠಕ್ಕೆ ಎಂಟ್ರಿ ಕೊಟ್ಟ ಕೆಲವೇ ಸಮಯದಲ್ಲಿ ಆರಂಭವಾದ ಮಳೆ ಸಂಜೆಯವರೆಗೆ ನಿರಂತರವಾಗಿ ಬರುತ್ತಲೇ ಇತ್ತು.

ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ದತ್ತಪೀಠ ಸೇರಿದಂತೆ ಸುತ್ತಮುತ್ತ ಬಂದ ಮಳೆಯಿಂದಾಗಿ ಕರ್ತವ್ಯ ನಿರತ ಸಿಬ್ಬಂದಿಗೆ ಅನಾನುಕೂಲವಾಯಿತು.

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ 48 ವಿಶೇಷ ಕಾರ್ಯನಿರ್ವಹಕ ದಂಡಾಧಿ ಕಾರಿಗಳನ್ನು ನೇಮಕ ಮಾಡಲಾಗಿತ್ತು. 26 ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿತ್ತು.

ದತ್ತಪೀಠಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ತಹಸೀಲ್ದಾರ್ ಡಾ. ಸುಮಂತ್ ಭೇಟಿ ನೀಡಿದ್ದರು. 5 ಕೆಸಿಕೆಎಂ 1

ದತ್ತಮಾಲಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾಧಾರಿಗಳಿಂದ ಶೋಭಾಯಾತ್ರೆ ನಡೆಸಿದರು.