ಡಾ.ಜಯಲಕ್ಷ್ಮಿ ಸೀತಾಪುರ ಅಂತಃಕರಣದ ಹೆಣ್ಣು ಮಗಳು: ಪ್ರೊ.ಎಂ.ಕೃಷ್ಣೇಗೌಡ

| Published : Jun 25 2024, 12:36 AM IST

ಡಾ.ಜಯಲಕ್ಷ್ಮಿ ಸೀತಾಪುರ ಅಂತಃಕರಣದ ಹೆಣ್ಣು ಮಗಳು: ಪ್ರೊ.ಎಂ.ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಯಲಕ್ಷ್ಮಿ ಸೀತಾಪುರ ಅವರು ಸದ್ದಿಲ್ಲದೆ ಆಯ್ಕೆಗಳನ್ನು ಸ್ವೀಕರಿಸಿ ಮುನ್ನಡೆದವರು. ಸ್ವಭಾವಗಳನ್ನು ಮೀರಿದ ಸ್ನೇಹ ಅಂತಹ ವ್ಯಕ್ತಿತ್ವ ಅವರಲ್ಲಿತ್ತು. ಗರಡಿ ರೋಚಕವಾದ ದೃಶ್ಯ, ಒಂದು ಸಂಸ್ಕೃತಿ ಇದ್ದ ಹಾಗೆ. ಅಂತಹ ಗರಡಿಯಲ್ಲಿ ತೊಡಗಿಸಿಕೊಂಡು ಅದ್ಭುತವಾದ ಕೆಲಸ ಮಾಡಿದ್ದಾರೆ. ಜಾನಪದ ಕ್ಷೇತ್ರಕ್ಕೆ ಒಂದು ದೊಡ್ಡ ಪರಂಪರೆ ಇದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಲಕ್ಷ್ಮಿ ಅವರ ನಿಧನ ಜಾನಪದ ಕ್ಷೇತ್ರಕ್ಕೆ ತುಂಬ ಲಾರದ ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮಿ ಸೀತಾಪುರ ಅವರು ಅಂತಃಕರಣದ ಹೆಣ್ಣು ಮಗಳು, ಹೆಣ್ಣುತನವನ್ನು ದಾಟಿ ಬೆಳೆದವರು ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಮತ್ತು ತಾಲೂಕು ಘಟಕ, ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಶಾಖೆ ಜಾನಪದ ಜನ್ನೆಯರು (ರಿ.), ಮಂಡ್ಯ ಜಿಲ್ಲೆ ವತಿಯಿಂದ ನಡೆದ ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅವರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.

ಜಯಲಕ್ಷ್ಮಿ ಸೀತಾಪುರ ಅವರು ಸದ್ದಿಲ್ಲದೆ ಆಯ್ಕೆಗಳನ್ನು ಸ್ವೀಕರಿಸಿ ಮುನ್ನಡೆದವರು. ಸ್ವಭಾವಗಳನ್ನು ಮೀರಿದ ಸ್ನೇಹ ಅಂತಹ ವ್ಯಕ್ತಿತ್ವ ಅವರಲ್ಲಿತ್ತು. ಗರಡಿ ರೋಚಕವಾದ ದೃಶ್ಯ, ಒಂದು ಸಂಸ್ಕೃತಿ ಇದ್ದ ಹಾಗೆ. ಅಂತಹ ಗರಡಿಯಲ್ಲಿ ತೊಡಗಿಸಿಕೊಂಡು ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದರು.

ಜಾನಪದ ಕ್ಷೇತ್ರಕ್ಕೆ ಒಂದು ದೊಡ್ಡ ಪರಂಪರೆ ಇದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಲಕ್ಷ್ಮಿ ಅವರ ನಿಧನ ಜಾನಪದ ಕ್ಷೇತ್ರಕ್ಕೆ ತುಂಬ ಲಾರದ ನಷ್ಟವಾಗಿದೆ ಎಂದರು.

ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಜಯಲಕ್ಷ್ಮಿ ಸೀತಾಪುರ ಅವರು ಹಾಸ್ಯದಲ್ಲಿ ಭಾಷಣ ಮಾಡಿ ಒಂದು ಜಾನಪದ ಗೀತೆ ಹಾಡುತಿದ್ದರು. ಪರಿಚಯ ಆದವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕುಸ್ತಿಯ ಬಗ್ಗೆ ಪುಸ್ತಕ ಬರೆದಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಅವರ ನೆನಪು, ಮನಸು ಸದಾ ಇರುತ್ತದೆ ಎಂದರು.

ರೈತ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ಕುಟುಂಬ ನಿರ್ವಹಣೆ ಹಾಗೂ ಜಾನಪದ ಕ್ಷೇತ್ರದಲ್ಲಿ ಜಯಲಕ್ಷ್ಮಿ ಸೀತಾಪುರ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ಅದ್ಭುತವಾದ ಕಲೆ, ಪ್ರತಿಭೆ, ಅಧ್ಯಯನ, ಜ್ಞಾನ ಸಂಪಾದನೆ ಇತ್ತು. ಇವರ ಸಾಧನೆಯನ್ನು ಸರ್ಕಾರ ಗುರುತಿಸಬೇಕಿತ್ತು ಎಂದರು.

ಕ್ಯಾತನಹಳ್ಳಿ ರಾಮಣ್ಣ ಮಾತನಾಡಿ, ಜಯಲಕ್ಷ್ಮಿ ಅವರು ಕ್ಷೇತ್ರ ಕಾರ್ಯದಲ್ಲಿ ದೂರದ ಹಳ್ಳಿಗಳಿಗೆ ಏಕಾಂಗಿಯಾಗಿ ಹೋಗಿ ಸಾಹಿತ್ಯ ಸಂಗ್ರಹ ಮಾಡಿಕೊಂಡು ಬರುತ್ತಿದ್ದದ್ದು ಪ್ರಶಂಸನೀಯವಾದದ್ದು ಎಂದರು.

ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ.ವ.ನಂ.ಶಿವರಾಮು, ಡಾ.ಎಚ್.ಪಿ.ಗೀತಾ, ಡಾ.ಎನ್.ಎಸ್.ದೇವಿಕಾ, ಎಚ್.ಆರ್.

ಧನ್ಯ ಕುಮಾರ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಜಾನಪದ ಜನ್ನೆಯರು ಸಂಘದ ಅಧ್ಯಕ್ಷೆ ಡಾ.ಎಸ್.ಸಿ.

ಮಂಗಳಾ, ಪ್ರೊ.ಜಿ.ಉಷಾರಾಣಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು, ಜಾನಪದ ಸಂಘಟಕ ಕೆ.ಎಂ. ಕೃಷ್ಣೇಗೌಡ ಕೀಲಾರ ಉಪಸ್ಥಿತರಿದ್ದರು.

ಕೀಲಾರ ಕ್ಷೀರಸಾಗರ ಮಿತ್ರಕೂಟದ ಕಲಾವಿದರು ಡಾ.ಜಯಲಕ್ಷ್ಮಿ ಸೀತಾಪುರ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ತತ್ವಪದ ಗಾಯನ ನಡೆಸಿಕೊಟ್ಟರು.