ಸಾರಾಂಶ
- ಕಾಂಗ್ರೆಸ್ ಟಿಕೆಟ್ ವಂಚಿತ, ಅಹಿಂದ ಮುಖಡ ವಿನಯಕುಮಾರ ಹೇಳಿಕೆ
- - -ಕನ್ನಡಪ್ರಭ ವಾರ್ತೆ, ಹರಪನಹಳ್ಳಿ
ಎರಡು ಪ್ರಬಲ ಕುಟುಂಬಗಳ ಸರ್ವಾಧಿಕಾರಿ ಧೋರಣೆಯಿಂದಾಗಿ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಧ್ವನಿ ಇಲ್ಲದಂತಾಗಿದೆ. ಸಾಮಾಜಿಕ ಕಳಕಳಿ ಇರುವಂತಹ ಹೊಸ ಯುವನಾಯಕರ ಅವಶ್ಯಕತೆ ಇದೆ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ.ಬಿ. ವಿನಯಕುಮಾರ ಹೇಳಿದರು.ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಬುಧವಾರ ಹರಪನಹಳ್ಳಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, "ವಿನಯ್ ಚಿತ್ತ ಮತದಾರರತ್ತ- ಜನಾಭಿಪ್ರಾಯ ಸಮಾಲೋಚನೆ " ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮತದಾರರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಧ್ವನಿ ಸಿಗಬೇಕೆಂದರೆ ಯುವಕರಿಗೆ ನಾಯಕತ್ವ ಸಿಗಬೇಕು ಎಂದರು.
ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತಹ ಶೋಷಿತ, ಹಿಂದುಳಿದ ಸಮುದಾಯಗಳ ನಾಯಕರು ಬೆಳೆಯುವಂತಹ ವಾತಾವರಣ, ಅವಕಾಶ ಇಲ್ಲ. ನಮ್ಮಂತಹ ಯುವಪೀಳಿಗೆ, ಹೊಸ ತಲೆಮಾರುಗಳಿಗೆ, ಹೊಸ ನಾಯಕರಿಗೆ ಅವಕಾಶದಿಂದ ವಂಚಿತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಬಂದಿದೆ. ನಾವು ಮತ್ತೊಬ್ಬರಿಗೆ ಹೆದರಿ ಜೀವನ ನಡೆಸುವುದು ಇದ್ದರೂ ಸತ್ತಂತೆ ಎಂದು ತಿಳಿಸಿದರು.ನಮ್ಮ ಸ್ವಾಭಿಮಾನಕ್ಕೆ ಎಂದಿಗೂ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು. ಹಾಗಾಗಿ, ನಾನು ಸ್ವಾಭಿಮಾನದ ಹೋರಾಟ ಕೈಗೊಂಡಿದ್ದೇನೆ. ದಾವಣಗೆರೆ ಜಿಲ್ಲೆ, ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಿಂತಲೂ ಸ್ವಅಭಿವೃದ್ಧಿ ರಾಜಕೀಯ ನಡೆದಿದೆ. ಕೇವಲ ಎರಡು ಕುಟುಂಬಗಳ ಸ್ವತ್ತಾಗಿ ಜಿಲ್ಲೆಯು ಜನರ ಕೈತಪ್ಪಿದಂತಾಗಿದೆ. ನಾವು ಅಂತಹ ಕುಟುಂಬಗಳ ಗುಲಾಮಗಿರಿ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ಹೊರಹಾಕಿದರು.
ವಿವಿಧ ಸಮಾಜಗಳ ಮುಖಂಡರಾದ ಬೀರಪ್ಪ, ದ್ಯಾಮೆಲ್ಲರ ರಾಮಪ್ಪ, ದಿಳ್ಯಪ್ಪ, ಯುವ ಮುಖಂಡ ಶರತ್‌ಕುಮಾರ, ಹಿರಿಯ ಪತ್ರಕರ್ತರಾದ ಪುರಂದರ ಲೋಕಿಕೆರೆ, ಚನ್ನವೀರಪ್ಪ, ದಾವಣಗೆರೆ ರಿಯಾಜ್ ಅಹಮ್ಮದ್, ನೀಲಪ್ಪ, ರಂಗಸ್ವಾಮಿ ಇತರರು ಇದ್ದರು.- - -
ಬಾಕ್ಸ್ ನನ್ನದು ಸ್ವಾಭಿಮಾನ ಹೋರಾಟ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾನು ಬಂದಿರುವುದೇ ಜನಸೇವೆ ಮಾಡುವ ಸದುದ್ದೇಶದಿಂದ. ಕಡಿಮೆ ಅವಧಿಯಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ, ಜನರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಳಿಸಿದ್ದೇನೆ. ಈಗ ಇದೇ ಜನರ ಒಕ್ಕೊರಲ ಅಭಿಪ್ರಾಯದಂತೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ. ನನ್ನ ಹೋರಾಟವು ಪ್ರಭಾ ಮಲ್ಲಿಕಾರ್ಜುನ್ ಅಥವಾ ಕಾಂಗ್ರೆಸ್ ವಿರುದ್ಧವಲ್ಲ. ಸ್ವಾಭಿಮಾನದ ಹೋರಾಟ ಇದಾಗಿದೆ ಎಂದು ವಿನಯಕುಮಾರ ಸ್ಪಷ್ಟಪಡಿಸಿದರು.- - -
-3ಕೆಡಿವಿಜಿ1:ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಅವರು ಹರಪನಹಳ್ಳಿ ತಾಲೂಕು ಹಲವಾಗಲು ವಿಧಾನಸಭಾ ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.