ದಾವಣಗೆರೆ ಕಲ್ಲು ತುರಾಟ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ

| Published : Sep 22 2024, 01:50 AM IST

ಸಾರಾಂಶ

ಹಿಂದು-ಮುಸ್ಲಿಮರು ಸಾಮರಸ್ಯದಿಂದಿರಲು ಸಂಸದೆ ಡಾ.ಪ್ರಭಾ ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರನ್ನು ಪೊಲೀಸರು ಬಂಧಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಜೊತೆಗೆ ತಾವು ಮಾತನಾಡಿದ್ದು, ಸಹಜ ಪರಿಸ್ಥಿತಿ ಮರುಕಳಿಸುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿದೆಯೆಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ. ವಿಪಕ್ಷದವರು ಇಂತಹದ್ದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು ಎನ್ನುವುದು ನನ್ನ ಅನಿಸಿಕೆಯಾಗಿದೆ. ಹಿಂದು-ಮುಸ್ಲಿಂ ಎಲ್ಲರೂ ಶಾಂತಿ, ಸಾಮರಸ್ಯದಿಂದ ಎಲ್ಲರೂ ಬಾಳಬೇಕು ಎಂಬುದು ನಮ್ಮ ನಿಲುವು ಎಂದು ಹೇಳಿದರು.

ಪ್ರತಿಭಟನೆಯೊಂದರಲ್ಲಿ ಪ್ರಚೋದನಾತ್ಮಕ ಭಾಷಣದಿಂದ ಆರಂಭವಾಗ ಗಲಾಟೆ ಇದು. 1992ರ ಹಿಂದು-ಮುಸ್ಲಿಂ ಗಲಾಟೆ ನಂತರ ಯಾವುದೇ ಗಲಭೆ, ಗದ್ದಲ ಆಗಿಲ್ಲ. ಅಲ್ಲಿಂದ ಇಲ್ಲಿವರೆಗೂ ನಾವು ಶಾಂತಿಯುತವಾಗಿಯೇ ಇದ್ದೆವು. ಒಂದು ಭಾಷಣದಿಂದ ಮತ್ತು ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದರಿಂದ ಇಷ್ಟೆಲ್ಲಾ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಊರಿನ ಶಾಂತಿ, ನೆಮ್ಮದಿ ಹಾಳು ಮಾಡುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರ ಜೊತೆಗೆ ಮಾತನಾಡಿದ್ದೇವೆ.

ದಾವಣಗೆರೆ ನಿಧಾನವಾಗಿ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ತಪ್ಪಿತಸ್ಥರೆಲ್ಲರ ವಿರುದ್ಧವೂ ಪೊಲೀಸ್ ಇಲಾಖೆಯಿಂದ ತನಿಖೆಯಾಗುತ್ತದೆ. ಕಲ್ಲು ತೂರಾಟದಲ್ಲಿ ಭಾಗಿಯಾದವರನ್ನು ಬಂಧಿಸಲುತ್ತಿದ್ದಾರೆ. ಬಂಧಿತರಲ್ಲಿ ಎರಡೂ ಸಮುದಾಯದವರೂ ಇದ್ದಾರೆ ಎಂದರು.

ಬಂಧಿತರೆಲ್ಲರ ವಿಚಾರಣೆಯಾಗಿ, ಘಟನೆಯಲ್ಲಿ ಭಾಗಿಯಾದವರ ಮೇಲೆ ಮುಂದಿನ ಕಾನೂನು ಕ್ರಮ ತಗೆದುಕೊಳ್ಳಲಾಗುತ್ತದೆ.

ಅಮಾಯಕ ಯುವಕರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆಂದು ಕೆಲವರು ಹೇಳುತ್ತಿದ್ದು, ನಾವು ಕೂಡ ಅಲ್ಲಿಗೆ ಭೇಟಿ ನೀಡುತ್ತೇವೆ. ಅಲ್ಲಿರುವ ಹಿಂದು-ಮುಸ್ಲಿಂ ಸಮುದಾಯವರು ಶಾಂತಿಯತವಾಗಿದ್ದಾರೆ. ಆದರೆ, ಇದು ಮೂರನೆಯವರು ಮಾಡುತ್ತಿರುವ ಕೆಲಸ ಎಂದು ಸಂಸದರು ದೂರಿದರು.

ದಾವಣಗೆರೆಯಲ್ಲಿ ಉಳಿದ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತವೆ. ಎಲ್ಲರಿಗೂ ನಮ್ಮ ಬೆಂಬಲವಿದ್ದು, ಹಿಂದು, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳು ಭ್ರಾತೃತ್ವದಿಂದ ಇರಬೇಕು ಎಂಬುದು ನಮ್ಮ ಉದ್ದೇಶ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.