ದಾವಣಗೆರೆ ತಾಲೂಕು ವಿವಿಧೆಡೆ ಮಳೆ, ತಣಿದ ಇಳೆ

| Published : Mar 21 2025, 12:30 AM IST

ಸಾರಾಂಶ

ಕಾದ ಕಾವಲಿಯಂತಾಗಿದ್ದ ಭೂರಮೆ ತಣಿಸುವಂತೆ ತಾಲೂಕಿನ ಹೆಬ್ಬಾಳ್ ಸುತ್ತಮುತ್ತಲಿನ ಪ್ರದೇಶದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಸಮನೆ ದಪ್ಪಹನಿಗಳ ಮಳೆಯಾಗಿದೆ. ವರ್ಷದ ಮೊದಲ ಮಳೆಗೆ ರೈತರು ಹರ್ಷಚಿತ್ತರಾಗಿದ್ದಾರೆ.

- ಹೆಬ್ಬಾಳ್ ಸುತ್ತಮುತ್ತ 20 ನಿಮಿಷ ಭಾರಿ ಮಳೆ, ರೈತರ ಮೊಗದಲ್ಲಿ ಹರ್ಷ - ಹುಣಸೇಕಟ್ಟೆ, ಹಾಲುವರ್ತಿ, ಹೊಸಹಳ್ಳಿ, ಹೆಬ್ಬಾಳ್ ಟೋಲ್‌ ಬಳಿ ಮಳೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾದ ಕಾವಲಿಯಂತಾಗಿದ್ದ ಭೂರಮೆ ತಣಿಸುವಂತೆ ತಾಲೂಕಿನ ಹೆಬ್ಬಾಳ್ ಸುತ್ತಮುತ್ತಲಿನ ಪ್ರದೇಶದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಸಮನೆ ದಪ್ಪಹನಿಗಳ ಮಳೆಯಾಗಿದೆ. ವರ್ಷದ ಮೊದಲ ಮಳೆಗೆ ರೈತರು ಹರ್ಷಚಿತ್ತರಾಗಿದ್ದಾರೆ.

ತಾಲೂಕಿನ ಹೆಬ್ಬಾಳ್‌, ಹೆಬ್ಬಾಳ್ ಬಡಾವಣೆ, ಹುಣಸೇಕಟ್ಟೆ, ಹಾಲುವರ್ತಿ, ಹೊಸಹಳ್ಳಿ, ಹೆಬ್ಬಾಳ್ ಟೋಲ್‌, ನೆರೆಯ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಭಾಗದಲ್ಲಿ ಮಳೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಆನಗೋಡು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು ಹೊತ್ತು ತುಂತುರು ಮಳೆಯಾಗಿದ್ದ ಬಿಟ್ಟರೆ, ಹೆಬ್ಬಾಳ್, ಹುಣಸೇಕಟ್ಟೆ, ಹಾಲುವರ್ತಿ, ಹೆಬ್ಬಾಳ್ ಬಡಾವಣೆ, ಹೆಬ್ಬಾಳ್ ಟೋಲ್ ಬಳಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾಗಿದ್ದು, ರಸ್ತೆ ಮೇಲೆಲ್ಲಾ ಮಳೆನೀರು ಹರಿಯಿತು.

ದಾವಣಗೆರೆ ನಗರ, ಜಿಲ್ಲೆಯ ವಿವಿಧೆಡೆ ಸಂಜೆ ದಿಢೀರನೇ ದಟ್ಟ ಮೋಡಗಳು ಆವರಿಸಿದ್ದವಾದರೂ ಮಳೆಯಾಗುವ ನಿರೀಕ್ಷೆ ಹುಸಿಯಾಯಿತು. ಆದರೆ, ಸುಮಾರು ಹೊತ್ತು ತಂಪು ಗಾಳಿ ಬೀಸಿ, ಮಳೆಯ ಆಹ್ಲಾದವನ್ನು ಕಟ್ಟಿ ಕೊಡುವ ಆಸೆ ಹುಟ್ಟಿಸಿತ್ತು. ಆದರೆ, ಮಳೆ ಮಾತ್ರ ಆಗಲಿಲ್ಲ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೆಬ್ಬಾಳ್ ಸುತ್ತಮುತ್ತ ಮಾತ್ರ ಜೋರು ಮಳೆಯಾಯಿತು.

ಉರಿ ಬಿಸಿಲಿನ ತಾಪದ ಮಧ್ಯೆಯೂ ಹೊಲ, ಗದ್ದೆ, ತೋಟ, ಗೋಮಾಳಕ್ಕೆ ಮೇಯಲು ಕರೆದೊಯ್ದಿದ್ದ ಆಕಳು, ಕರು, ಎಮ್ಮೆ, ಕುರಿಗಳು ಮಳೆಯಲ್ಲಿ ನೆಂದು, ಬೇಸಿಗೆ ಧಗೆ ತಣಿಸಿಕೊಂಡವು. ಸುರಿವ ಮಳೆಯ ತಂಪು ವಾತಾವರಣದಲ್ಲಿ ತಮ್ಮ ಮಾಲೀಕರ ಕೊಟ್ಟಿಗೆ, ಮನೆಗಳತ್ತ ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕಿದವು.

ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ರೈತರು ಮನೆ, ಕೆಳಸೇತುವೆ, ಹೋಟೆಲ್, ಅಂಗಡಿಗಳ ಬಳಿ ನಿಂತು ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರು.

- - - -20ಕೆಡಿವಿ6, 7.ಜೆಪಿಜಿ:

ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ಗುರುವಾರ ಸಂಜೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಸಮನೆ ಮಳೆಯಾಯಿತು. -20ಕೆಡಿವಿ8.ಜೆಪಿಜಿ:

ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ಗುರುವಾರ ಸಂಜೆ 20 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಸಮನೆ ಮಳೆಯಾಗಿದ್ದರಿಂದ ಜನರು ರಾಷ್ಟ್ರೀಯ ಹೆದ್ದಾರಿ 48ರ ಕೆಳಸೇತುವೆಯಡಿ ಆಶ್ರಯ ಪಡೆದರು.