ಯುಬಿಡಿಟಿಗಾಗಿ ದಾವಣಗೆರೆ ಬಂದ್‌: 17 ಬಂಧನ, ಬಿಡುಗಡೆ

| Published : Oct 17 2024, 12:59 AM IST

ಯುಬಿಡಿಟಿಗಾಗಿ ದಾವಣಗೆರೆ ಬಂದ್‌: 17 ಬಂಧನ, ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೆಗ್ಗಳಿಕೆಯ, ಬಡ, ಮಧ್ಯಮ ವರ್ಗದ ಮನೆ ಮಕ್ಕಳು ಎಂಜಿನಿಯರ್‌ ಆಗಲು ಆಸರೆಯಾಗಿದ್ದ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಶೇ.50 ಪೇಮೆಂಟ್ ಕೋಟಾ ನೀತಿ ಜಾರಿಗೊಳಿಸಿದ್ದನ್ನು ರದ್ದುಪಡಿಸುವಂತೆ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಕಂಡರೂ, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

- ಶೇ.50 ಪೇಮೆಂಟ್ ಕೋಟಾ ರದ್ದಾಗುವವರೆಗೂ ಹೋರಾಟ ನಿಲ್ಲದು: ಸಂಘಟನೆಗಳ ಒಕ್ಕೊರಲ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೆಗ್ಗಳಿಕೆಯ, ಬಡ, ಮಧ್ಯಮ ವರ್ಗದ ಮನೆ ಮಕ್ಕಳು ಎಂಜಿನಿಯರ್‌ ಆಗಲು ಆಸರೆಯಾಗಿದ್ದ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಶೇ.50 ಪೇಮೆಂಟ್ ಕೋಟಾ ನೀತಿ ಜಾರಿಗೊಳಿಸಿದ್ದನ್ನು ರದ್ದುಪಡಿಸುವಂತೆ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಕಂಡರೂ, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನಗರದ ಸರ್ಕಾರಿ ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಕೋಟಾ ರದ್ದತಿಗಾಗಿ ಎಐಡಿಎಸ್‌ಒ, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಕನ್ನಡಪರ, ರೈತಪರ, ಪ್ರಗತಿಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಬಂದ್ ವೇಳೆ ಇಲ್ಲಿನ ಕೆಎಸ್ಸಾರ್ಟಿಸಿ ನೂತನ ಬಸ್‌ ನಿಲ್ದಾಣ ಬಳಿ ಸುಮಾರು 17 ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದು, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ದಾವಣಗೆರೆ ಬಂದ್ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದಲೇ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕರು ಜನರಿಗೆ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡುತ್ತಾ ಬೈಕ್ ರ್ಯಾಲಿ, ಪಾದಯಾತ್ರೆ ಮೂಲಕ ಸಾಗಿದರು. ಶ್ರೀ ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರೆ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಎದುರು ಹಳೆ ಟೈರ್ ಸುಡುವ ಮೂಲಕ ಸರ್ಕಾರದ ಶಿಕ್ಷಣ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದರು. ತಕ್ಷಣವೇ ಪೊಲೀಸರು ಬೆಂಕಿ ನಂದಿಸಿ, ಟೈರ್‌ಗೆ ಬೆಂಕಿ ಇಟ್ಟು ಪ್ರತಿಭಟಿಸುತ್ತಿದ್ದವರನ್ನು ವಶಕ್ಕೆ ಪಡೆದರು.

ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಎರಡೂ ಕಡೆ ರಸ್ತೆ ತಡೆಗೆ ಮುಂದಾದಾಗ ಪೊಲೀಸರು ತಡೆದರು. ಆಗ ಪ್ರತಿಭಟನಾಕಾರರು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಹೋರಾಟನಿರತ ಮಂಜುನಾಥ ಕುಕ್ಕವಾಡ, ಭಾರತಿ, ಶಶಿಕಲಾ, ಶಾಂತಿ, ಟಿ.ಎಸ್.ಸುಮನ್‌, ಶಿವು, ರೋಹಿತ್, ದೇವಮ್ಮ, ಅನಿಲ್, ಸುನಿಲ್‌, ಪರಶುರಾಮ, ಅಭಿಷೇಕ, ವೆಂಕಟೇಶ, ಅಖಿಲೇಶ, ವೆಂಕಟೇಶ, ಪೀರಸಾಬ್‌, ಮೇಘನಾ ಕಾರ್ಯ ಇತರರನ್ನು ಪೊಲೀಸರು ಮುಂಜಾಗ್ರತೆಯಾಗಿ ಬಂಧಿಸಿ, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ಕೆಎಸ್ಸಾರ್ಟಿಸಿ ಬಸ್‌ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆಟೋ ರಿಕ್ಷಾ ಇತರೆ ವಾಹನಗಳ ಸಂಚಾರವೂ ವಿರಳವಾಗಿತ್ತು. ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಪ್ರಮುಖ ವಾಣಿಜ್ಯ ಪ್ರದೇಶಗಳಾದ ಅಶೋಕ ರಸ್ತೆ, ಹದಡಿ ರಸ್ತೆ. ಹಳೇ ಪಿ.ಬಿ. ರಸ್ತೆ, ಪ್ರವಾಸಿ ಮಂದಿರ ರಸ್ತೆ ಸೇರಿದಂತೆ ಅನೇಕ ಕಡೆ ಯುಬಿಡಿಟಿ ಕಾಲೇಜಿನ ವಿಚಾರವಾಗಿ ಕೈಗೊಂಡ ಹೋರಾಟವನ್ನು ಬೆಂಬಲಿಸಿ, ಸ್ವಪ್ರೇರಣೆಯಿಂದ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ವ್ಯಾಪಾರಸ್ಥರು, ಮಾಲೀಕರು ಬೆಂಬಲ ಸೂಚಿಸಿದರು. ಕೆಲವು ಕಡೆ ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ, ಶಾಲಾ-ಕಾಲೇಜು, ಸರ್ಕಾರಿ-ಖಾಸಗಿ ಕಚೇರಿಗಳು, ಬ್ಯಾಂಕ್, ಹಣಕಾಸು ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಮುಂಜಾಗ್ರತೆಯಾಗಿ ಪೊಲೀಸ್ ಇಲಾಖೆಯಿಂದ ಖಾಸಗಿ, ನಗರ ಸಾರಿಗೆ, ಸಾರಿಗೆ ಬಸ್ಸುಗಳ ಮಾರ್ಗ ಬದಲಾವಣೆ ಮಾಡಿತ್ತು. ಶ್ರೀ ಜಯದೇವ ವೃತ್ತದ ಮೂಲಕ ಇತರೆ ಮಾರ್ಗದಲ್ಲಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ವಿವಿಧೆಡೆ ಸಂಚರಿಸುತ್ತಾ, ಅಧಿಕಾರಿ, ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.

- - -

ಬಾಕ್ಸ್‌ * ಬಂದ್‌ ಬೆಂಬಲಿಸಿದ ಜನತೆಗೆ ಕೃತಜ್ಞತೆ ದಾವಣಗೆರೆ: ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟು ಕೋಟಾ ರದ್ದುಪಡಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಬಂದ್ ಗೆ ಸ್ವಪ್ರೇರಣೆಯಿಂದ ಬೆಂಬಲಿಸಿದ, ಹೋರಾಟದಲ್ಲಿ ಜೊತೆಗೂಡಿದ್ದ ಕನ್ನಡಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ಉದ್ಯಮಿಗಳು, ಮಹಾಜನತೆಗೆ ಎಐಡಿಎಸ್‌ ಹಾಗೂ ಯುಬಿಡಿಟಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಕೃತಜ್ಞತೆ ಅರ್ಪಿಸಿವೆ.

ಎಐಡಿಎಸ್‌ಓ ರಾಜ್ಯ ಉಪಾಧ್ಯಕ್ಷ ಅಭಯಾ ದಿವಾಕರ್ ಮಾತನಾಡಿ, ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಸ್ಪಂದಿಸಿದ ದಾವಣಗೆರೆ ಜನತೆ ಹೋರಾಟ ಸಂಪೂರ್ಣ ಯಶಸ್ವಿಗೊಳಿಸಿದ್ದಾರೆ. ರಾಜ್ಯ ಸರ್ಕಾರ ಒಂದಾದ ನಂತರ ಮತ್ತೊಂದು ರೀತಿ ಎಂಬಂತೆ ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಎಲ್ಲ ಸರ್ಕಾರಗಳು ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟೀಕರಣ ಮಾಡಲು ಹೊರಟಿವೆ. ಇದು ಕೇವಲ ದಾವಣಗೆರೆ ಸರ್ಕಾರಿ ಯುಬಿಡಿಟಿ ಕಾಲೇಜಿಗೆ ಮಾತ್ರವೇ ಸೀಮಿತವಲ್ಲ. ಮುಂದೊಂದು ದಿನ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಇದೇ ತೆರೆನಾದ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ಬ್ಯಾಚ್‌ನ ಒಟ್ಟು 504 ಸೀಟುಗಳಲ್ಲಿ 254 ಸೀಟಿಗೆ ₹97 ಸಾವಿರ, ಉಳಿದ 250 ಸೀಟುಗಳಿಗೆ ಪಡೆಯುತ್ತಿರುವ ₹43 ಸಾವಿರ ಪಾವತಿ ಮಾಡಬೇಕಾಗುತ್ತದೆ. ಶೇ.50 ಪೇಮೆಂಟ್ ಕೋಟಾ ಸೀಟುಗಳಿಗೆ ₹97 ಸಾವಿರ ನಿಗದಿಪಡಿಸುವ ಮೂಲಕ ಸರ್ಕಾರವೇ ರಾಜಾರೋಷವಾಗಿ ಬಡ, ಮಧ್ಯಮ ವರ್ಗದವರ ಮಕ್ಕಳಿಗೆ ಸಿಗಬೇಕಾಗಿದ್ದ ಸೀಟುಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಶೇ.50 ಪೇಮೆಂಟ್ ಸೀಟುಗಳ ಆದೇಶ ತಕ್ಷಣ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳ ಬೃಹತ್ ಚಳವಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆನರಾ ಬ್ಯಾಂಕ್ ಎಂಪ್ಲಾಯಿ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಹಿರೇಮಠ ಮಾತನಾಡಿ, ದಾವಣಗೆರೆ ಮಹಾ ಜನತೆ ಒಗ್ಗಟ್ಟಾಗಿ ನಿಂತು ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸರ್ಕಾರದ ಪ್ರತಿಷ್ಟಿತ ಯುಬಿಡಿಟಿ ಕಾಲೇಜು ಉಳಿಯುವವರೆಗೂ, ಶೇ.50 ಪೇಮೆಂಟ್ ಕೋಟಾ ರದ್ದಾಗುವವರೆಗೂ ಹೋರಾಟ ನಿರಂತರವಾಗಿ ನಡೆಯುತ್ತದೆ. ನಾವೆಲ್ಲರೂ ಈ ಹೋರಾಟದ ಜೊತೆಗಿರುತ್ತೇವೆ ಎಂದು ಹೇಳಿರದು.

ಎಐಡಿಎಸ್‌ಒ ಸಂಘಟನೆಯ ರಾಜ್ಯ, ಜಿಲ್ಲಾ ನಾಯಕರು, ಕಾರ್ಯಕರ್ತರು, ರೈತ, ಕಾರ್ಮಿಕ, ದಲಿತ, ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು. ಬಂದ್ ಹಿನ್ನೆಲೆಯಲ್ಲಿ ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ, ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಮಧ್ಯಾಹ್ನದ ವೇಳೆಗೆ ದಾವಣಗೆರೆಯಲ್ಲಿ ಎಂದಿನ ವಾತಾವರಣ ಕಂಡುಬಂದಿತು.

- - - -(ಫೋಟೋಗಳಿವೆ)