ಹತ್ತು ವರ್ಷದೊಳಗೆ ದಾವಣಗೆರೆ ಐಎಎಸ್‌ ಹಬ್‌ ಸಂಕಲ್ಪ

| Published : Sep 16 2024, 01:50 AM IST

ಸಾರಾಂಶ

ವಿದ್ಯಾನಗರಿ ದಾವಣಗೆರೆಯನ್ನು ಇನ್ನು 10 ವರ್ಷಗಳಲ್ಲಿ ಐಎಎಸ್ ಹಬ್ ಮಾಡುವ ಸಂಕಲ್ಪ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೂಪಿಸಲಾಗುವುದು ಎಂದು ಇನ್‌ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಹೇಳಿದ್ದಾರೆ.

- ಇನ್‌ಸೈಟ್ಸ್ ಐಎಎಸ್ ಕೇಂದ್ರ ಉದ್ಘಾಟನೆಯಲ್ಲಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಘೋಷಣೆ

- ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಿಂದ 10 ಪರೀಕ್ಷಾರ್ಥಿಗಳಿಗೆ ಉಚಿತ ತರಬೇತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾನಗರಿ ದಾವಣಗೆರೆಯನ್ನು ಇನ್ನು 10 ವರ್ಷಗಳಲ್ಲಿ ಐಎಎಸ್ ಹಬ್ ಮಾಡುವ ಸಂಕಲ್ಪ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೂಪಿಸಲಾಗುವುದು ಎಂದು ಇನ್‌ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಇನ್‌ಸೈಟ್ಸ್‌ ಸಂಸ್ಥೆಯ ದಾವಣಗೆರೆ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪೂರ್ವದಲ್ಲಿ ದಾವಣಗೆರೆಯಲ್ಲಿ ಐಎಎಸ್, ಐಪಿಎಸ್, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸ್ಥಾಪಿಸುವ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಇಂದು ಸಂಸ್ಥೆಯಿಂದ ತರಬೇತಿ ಕೇಂದ್ರ ಶುರು ಮಾಡಿದ್ದೇವೆ ಎಂದು ಹೇಳಿದರು.

ಸಂಪೂರ್ಣ ಸಹಕಾರ-ಮಾರ್ಗದರ್ಶನ:

ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಪರೀಕ್ಷಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ತರಬೇತಿ ಕೇಂದ್ರ ಆರಂಭಿಸಲಾಗಿದೆ. ಉನ್ನತ ಹುದ್ದೆಗಳ ಕನಸು ಕಾಣುವ ಬಡವರು, ಹಿಂದುಳಿದವರ ಮಕ್ಕಳು ಇಲ್ಲಿ ತರಬೇತಿ ಪಡೆದು, ತಮ್ಮ ಕನಸುಗಳನ್ನು ಈಡೇರಿಸಿಕೊಂಡು ಗುರಿ ಸಾಧಿಸಬಹುದು. ಇದಕ್ಕೆ ನಮ್ಮ ಸಂಸ್ಥೆಯು ಎಲ್ಲ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ನೀಡಲಿದೆ ಎಂದರು.

ಉತ್ತರ, ದಕ್ಷಿಣ ಸೇರಿದಂತೆ ದಾವಣಗೆರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ತಲಾ 10 ವಿದ್ಯಾರ್ಥಿಗಳಂತೆ 80 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಇದರಲ್ಲಿ 40 ಯುವಕರು, 40 ಯುವತಿಯರಿಗೆ ಅವಕಾಶ. ಇದಕ್ಕಾಗಿ ಸಂಸ್ಥೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಬೇಕು. ಬೆಂಗಳೂರಿನಿಂದಲೇ ನುರಿತ ಉಪನ್ಯಾಸಕರು, ಇನ್‌ಸೈಟ್ಸ್‌ ಸಂಸ್ಥೆಯಲ್ಲೇ ತರಬೇತಿ ಪಡೆದು, ಐಎಎಸ್‌, ಐಪಿಎಸ್ ಪರೀಕ್ಷೆ ಬರೆದು, ಉನ್ನತ ಹುದ್ದೆಯಲ್ಲಿರುವವರು ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದರು.

₹250 ಕೋಟಿ ರಾಜ್ಯಕ್ಕೆ ಉಳಿತಾಯ:

ರಾಜ್ಯದಿಂದ ಪ್ರತಿವರ್ಷ ₹250 ಕೋಟಿ ಐಎಎಸ್‌, ಐಪಿಎಸ್ ಅಭ್ಯರ್ಥಿಗಳಿಗಾಗಿ ದೆಹಲಿಗೆ ಹೋಗುತ್ತಿತ್ತು. ಆದರೆ, ಬೆಂಗಳೂರಿನಲ್ಲಿ ತಮ್ಮ ಇನ್‌ಸೈಟ್ಸ್ ಅಕಾಡೆಮಿ ಆರಂಭವಾದ ನಂತರ ಅಷ್ಟೂ ಹಣ ಕರ್ನಾಟಕದಲ್ಲಿಯೇ ಉಳಿಯುತ್ತಿದೆ. ಭವಿಷ್ಯದಲ್ಲಿ ದಾವಣಗೆರೆ ಐಎಎಸ್ ಹಬ್ ಆಗಿ ಪರಿವರ್ತನೆಯಾಗಲಿದ್ದು, ವ್ಯಾಪಾರ, ವಹಿವಾಟು ಸಹ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮ ನಾಗಾಲೋಟದಲ್ಲಿ ಸಾಗುತ್ತಿದೆ. ಹೋಟೆಲ್, ಅಂಗಡಿ, ಡಿಟಿಪಿ, ಜೆರಾಕ್ಸ್ ಸೆಂಟರ್ ಹೀಗೆ ನೂರಾರು ಮಂದಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಹುದ್ದೆಗಳೂ ಸಿಗಲಿವೆ ಎಂದು ವಿವರಿಸಿದರು.

ನಿವೃತ್ತ ಪ್ರಾಚಾರ್ಯ ಯಲ್ಲಪ್ಪ ಮಾತನಾಡಿ, ಇನ್‌ಸೈಟ್ಸ್‌ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಅವರ ದೂರದೃಷ್ಟಿ ಫಲವಾಗಿ ದಾವಣಗೆರೆಯಲ್ಲಿ ಉತ್ತಮ ತರಬೇತಿ ಕೇಂದ್ರ ಆರಂಭವಾಗಿದೆ ಎಂದು ತಿಳಿಸಿದರು.

ಮಳಲ್ಕೆರೆ ಓಬಳೇಶ ಮಾತನಾಡಿ, 70-80ರ ದಶಕದಲ್ಲಿ ಇಂತಹ ತರಬೇತಿ, ಮಾರ್ಗದರ್ಶನ ನೀಡುವ ಸಂಸ್ಥೆಗಳೇ ಇರಲಿಲ್ಲ. ಇದರಿಂದಾಗಿ ಸಾಕಷ್ಟು ವಿದ್ಯಾವಂತರು ಉನ್ನತ ಹುದ್ದೆಗಳ ಕನಸು ಕಾಣಲು ಸಾಧ್ಯವಾಗಲಿಲ್ಲ. ಇಂದು ಇನ್‌ಸೈಟ್ಸ್‌ನಂತಹ ಪ್ರತಿಷ್ಟಿತ ಸಂಸ್ಥೆ ದಾವಣಗೆರೆಯಲ್ಲಿ ಕೇಂದ್ರ ತೆರೆಯುವ ಮೂಲಕ ವಿದ್ಯಾರ್ಥಿ, ಯುವ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದು ಹೇಳಿದರು.

ನಿವೃತ್ತ ಬೋಧಕ ಹದಡಿ ಷಣ್ಮುಖಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯ ಇತಿಹಾಸದಲ್ಲೇ ಇದೊಂದು ಮೈಲುಗಲ್ಲಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಈ ಭಾಗದಲ್ಲಿ ಗುಣಾತ್ಮಕ ತರಬೇತಿ ಸಂಸ್ಥೆಯ ಕೊರತೆ ಕಾಡುತ್ತಿತ್ತು. ಅಂತಹ ಕೊರತೆ ನೀಗಿಸುವಂತೆ ಇನ್‌ಸೈಟ್ಸ್‌ ಸಂಸ್ಥೆಯು ಕಾರ್ಯಾರಂಭ ಮಾಡಿದೆ. ಈ ಸಂಸ್ಥೆಯ ಮೂಲಕ ಪ್ರಬುದ್ಧ ಅಧಿಕಾರಿಗಳು ಹೊರ ಹೊಮ್ಮಲಿ ಎಂದು ಹಾರೈಸಿದರು.

ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆ ಕಾರ್ಯಕ್ರಮ ನಡೆಸಿಕೊಟ್ಟರು.

- - -

ಬಾಕ್ಸ್‌

* ಸೆ.30ರಿಂದ ತರಬೇತಿ

ಇನ್‌ಸೈಟ್ಸ್‌ ಐಎಎಸ್‌ ದಾವಣಗೆರೆಯಲ್ಲಿ ಆರಂಭಿಸಿರುವ ಶಾಖೆಯಲ್ಲಿ ಈಗ ಕೆಎಎಸ್‌ ತರಬೇತಿ ಆರಂಭವಾಗಿದೆ. ಸೆ.30ರಿಂದ ಐಎಎಸ್‌ ತರಬೇತಿ ಶುರುವಾಗಲಿದೆ. ಕೆಎಎಸ್‌ಗೂ ಯುಪಿಎಸ್‌ಸಿ ಮಾದರಿಯಲ್ಲಿ ತರಬೇತಿ ನೀಡಲಾಗುವುದು. ನನಗೆ ಸೇವೆ ಮಾಡುವುದಕ್ಕೆ ರಾಜಕೀಯ ಕ್ಷೇತ್ರವೇ ಬೇಕೆಂದೇನೂ ಇಲ್ಲ. ಇಲ್ಲಿ ತರಬೇತಿ ಕೇಂದ್ರದ ಮೂಲಕ ಅಧಿಕಾರಿಗಳು, ಉದ್ಯಮಿಗಳನ್ನು, ಯುವ ನಾಯಕರನ್ನು ಸೃಷ್ಟಿಸಲು ಸಾಕಷ್ಟು ಅವಕಾಶಗಳಿವೆ ಎಂದು ಇನ್‌ಸೈಟ್ಸ್‌ನ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.

- - -

-5ಕೆಡಿವಿಜಿ13, 14:

ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಮಾತನಾಡಿದರು.