ಸಾರಾಂಶ
ಭೂಮಿಪೂಜೆ । ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನದ ಪೆಂಡಾಲ್‌ಗೆ ತಯಾರಿ । ವಿಶ್ವ ಸಂಕಲ್ಪ ಸ್ಮರಣ ಸಂಚಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಕನ್ನಡ ನಾಡು ನುಡಿಯ ಹಿರಿಮೆ ಗರಿಮೆಯನ್ನು ಹೆಚ್ಚಿಸುವಲ್ಲಿ ದಾವಣಗೆರೆ ಜನರ ಪಾತ್ರ ದೊಡ್ಡದು. ಮಧ್ಯ ಕರ್ನಾಟಕ ಭಾಗದ ದಾವಣಗೆರೆಯು ಭಾಷಾ ಪ್ರೇಮಕ್ಕೆ ಹೆಸರಾದ ಜಿಲ್ಲೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನದ ಯಶಸ್ಸಿಗೆ ದಾವಣಗೆರೆ ಜನರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎನ್ನುವ ಭರವಸೆಯಿದೆ. ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ತಿಳಿಸಿದರು.
ನಗರದ ಪ್ರೌಢಶಾಲಾ ಮೈದಾನದಲ್ಲಿ ಕನ್ನಡ ಸಮ್ಮೇಳನಕ್ಕೆ ಪೆಂಡಾಲ್ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಕಸಾಪ ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವಭಾವಿಯ ರೀತಿಯಲ್ಲಿ ಈ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ದಾವಣಗೆರೆ ಮಹಾನಗರಪಾಲಿಕೆಯ ಮಾಜಿ ಮೇಯರ್, ಜಿಲ್ಲೆಯ ಎಲ್ಲ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ. ಜಿಲ್ಲಾಡಳಿದ ಸಹಕಾರವನ್ನೂ ನಿರೀಕ್ಷಿಸುತ್ತಿದ್ದೇವೆ. ಸಮ್ಮೇಳನದ ಸವಿ ನೆನಪಿಗಾಗಿ ‘ವಿಶ್ವ ಸಂಕಲ್ಪ’ ಎನ್ನುವ ಸ್ಮರಣ ಸಂಚಿಕೆ ಹೊರಬರಲಿದೆ. ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಾರ್ವಜನಿಕರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯನ್ನು ಬಯಸುತ್ತೇವೆ ಎಂದರು.
ಸಮ್ಮೇಳನದ ಆಯೋಜಕ ವಿಶ್ವ ಕನ್ನಡಿಗರ ಟ್ರಸ್ಟ್ನ ಮುಖ್ಯಸ್ಥ ಆನಂದಗೌಡರು ಮಾತನಾಡಿ, ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿರುವ ಸಾಹಿತಿಗಳು, ಕಲಾವಿದರು, ಸಿನಿಮಾ ಕಲಾವಿದರು ಹಾಗೂ ಗಣ್ಯರು ಈ ಸಮ್ಮೇಳನಕ್ಕೆ ಆಗಮಿಸುತ್ತಾರೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಆರು ದಿನಗಳ ಕಾಲ ನಡೆಯುವ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನ ಮತ್ತು ವಸ್ತು ಪ್ರದರ್ಶನವು ಹಲವು ವಿಶೇಷತೆಗಳನ್ನು ಹೊಂದಿದೆ. ಸಮ್ಮೇಳನವು ಸಾಹಿತ್ಯ ಮೇಳ, ಶಿಕ್ಷಣ ಮೇಳ, ಕೃಷಿ ಮೇಳ, ಉದ್ಯೋಗ ಮೇಳ, ಯೂಟ್ಯೂಬರ್ಸ್ ಮೇಳ, ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿ ನಿರೂಪಿಸಿದರು ಮತ್ತು ಸಂಘಟನಾ ಕಾರ್ಯದರ್ಶಿ ಸಿ.ಜ.ಜಗದೀಶ್ ಕೂಲಂಬಿ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಕಲಾವಿದ ಎ.ಮಹಾಲಿಂಗಪ್ಪ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್, ಕಸಾಪ ದಾವಣಗೆರೆ ತಾ. ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಹರಿಹರ ತಾ.ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಪದಾಧಿಕಾರಿಗಳಾದ ಸಿ.ಕೆ.ರುದ್ರಾಕ್ಷಿ ಬಾಯಿ, ಎಸ್.ಎಂ.ಮಲ್ಲಮ್ಮ, ಪರಮೇಶ್ವರಪ್ಪ ದಾಗಿನಕಟ್ಟೆ, ಆರ್.ಶಿವಕುಮಾರ್, ಬೇತೂರು ಷಡಾಕ್ಷರಪ್ಪ, ವಿದುಷಿ ಶೋಭಾ ರಂಗನಾಥ್, ಉಮಾದೇವಿ, ಪರಮೇಶ್ವರಪ್ಪ, ಲಲಿತ್‌ಕುಮಾರ್ ಜೈನ್, ನಾಗಭೂಷಣ, ಶ್ರೀನಿವಾಸ್, ಪಿ.ಜಯರಾಮನ್ ಮತ್ತಿತರರು ಹಾಜರಿದ್ದರು.