ಸಾರಾಂಶ
- ವಾಟರ್ ಗನ್, ಪಿಚಕಾರಿ, ವಾಟರ್ ಬಲೂನ್‌ಗಳಲ್ಲಿ ಬಣ್ಣದ ನೀರೆರಚಾಟ । ಗಮನ ಸೆಳೆದ ಸೊಪ್ಪು-ತರಕಾರಿ ಬಣ್ಣದಾಟ
- ಕೊಟ್ರ ಬಸಪ್ಪ ವೃತ್ತದಲ್ಲಿ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದ ಯುವಜನ । ಡಿಸಿ, ಎಸ್‌ಪಿ, ಜಿಪಂ ಸಿಇಒ, ಅಧಿಕಾರಿಗಳಿಂದಲೂ ಹಬ್ಬ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಮದಹನದ ಮಾರನೆಯ ದಿನವಾದ ಶುಕ್ರವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಜನರು ಸಡಗರ, ಸಂಭ್ರಮದಿಂದ ಹೋಳಿ ಹಬ್ಬದಂದು ಬಣ್ಣಗಳಲ್ಲಿ ಮಿಂದೆದ್ದರು.ಕಳೆದ ರಾತ್ರಿ ಕಾಮದಹನ ಆಚರಣೆ ಮುಗಿದು ಮಾರನೆಯ ಶುಕ್ರವಾರದ ಹೋಳಿ ಹಬ್ಬಕ್ಕೆ ಜಿಲ್ಲೆಯಲ್ಲಿ ಮಕ್ಕಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬೆಳ್ಳಂಬೆಳಗ್ಗೆ ಏಳುತ್ತಲೇ ಮಕ್ಕಳು ಬಣ್ಣದ ಪಾಕೆಟ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು, ಮನೆಯವರಿಗೆಲ್ಲ ಬಣ್ಣ ಹಚ್ಚಲು ಶುರುಮಾಡಿದರು. ವಾಟರ್ ಗನ್, ಪಿಚಕಾರಿ, ವಾಟರ್ ಬಲೂನ್‌ಗಳಲ್ಲಿ ಬಣ್ಣದ ನೀರನ್ನು ತುಂಬಿ, ಮನೆ ಅಂಗಳದಲ್ಲಿ ನಿಂತು, ಪರಿಚಯಸ್ಥರು, ದಾರಿಹೋಕರಿಗೆ ಬಣ್ಣದ ನೀರು ಸಿಡಿಸುತ್ತಾ, ಹ್ಯಾಪಿ ಹೋಳಿ ಎಂದು ಹೇಳಿ ಸಂಭ್ರಮಿಸುತ್ತಿದ್ದರು.
ಇಡೀ ದಾವಣಗೆರೆಯೇ ಬಣ್ಣದಲ್ಲಿ ಮಿಂದೆದ್ದಂತೆ ಕಂಡುಬಂತು. ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಮಹಿಳೆಯರು, ಪತಿ-ಪತ್ನಿ, ಹಿರಿಯ ನಾಗರೀಕರು ಹೀಗೆ ಎಲ್ಲರೂ ವಯಸ್ಸಿನ ಬೇಧ ಮರೆತು, ಬಣ್ಣದೋಕುಳಿ ಆಡಿದರು.ಶಾಂತಿ, ಸಾಮರಸ್ಯ:
ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಯುವಕ- ಯುವತಿಯರು ಸಾಮೂಹಿಕವಾಗಿ ಹೋಳಿ ಆಚರಿಸಿದರು. ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಹಿತಕರ ಘಟನೆಗೆ ಅವಕಾಶ ಆಗದಂತೆ ಸಂಘಟಕರು ಯುವತಿಯರು, ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಹೋಳಿ ಆಚರಿಸಲು ವ್ಯವಸ್ಥೆ ಮಾಡಿದ್ದರು. ಮತ್ತೊಂದು ಕಡೆ ಯುವಕರು ಡಿಜೆ ಸಂಗೀತದ ಸದ್ದಿಗೆ ಕುಣಿದು ಕುಪ್ಪಳಿಸಿದರು. ಶಾಂತಿ, ಸಾಮರಸ್ಯದಿಂದ ಹೋಳಿ ಆಚರಿಸುವಂತೆ ನಿರಂತರ ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗುತ್ತಿತ್ತು.ಅಧಿಕಾರಿಗಳ ಸಂಭ್ರಮ:
ನಗರದ ಆಫೀಸರ್ಸ್ ಕ್ಲಬ್‌ನಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಸಹ ಡೋಲು ಬಾರಿಸಿ, ಪರಸ್ಪರರಿಗೆ ಬಣ್ಣ ಹಚ್ಚಿ ಹೋಳಿ ಶುಭಾಶಯ ವಿನಿಯಮ ಮಾಡಿಕೊಂಡರು. ಎಲ್ಲ ಕಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸ್ವತಃ ಹಿರಿಯ ಅಧಿಕಾರಿಗಳೇ ಎಲ್ಲ ಕಡೆಗೂ ಹದ್ದಿನ ಕಣ್ಣಿಟ್ಟಿದ್ದರು.ಜಿಲ್ಲಾ ಕೇಂದ್ರದ ಪ್ರತಿಯೊಂದು ಬಡಾವಣೆ, ಜನವಸತಿ ಪ್ರದೇಶ, ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಬಳಿ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರು ಹೋಳಿ ಸಂಭ್ರಮದಲ್ಲಿ ತೇಲುತ್ತಿದ್ದುದು ಕಂಡುಬಂತು. ವಿದ್ಯಾರ್ಥಿ ಸಮೂಹ ಬೈಕ್‌ಗಳಲ್ಲಿ ಅರಚಿಕೊಂಡು ರಸ್ತೆಯ ತುಂಬೆಲ್ಲಾ ಓಡಾಡುತ್ತಿದ್ದರೆ, ಯುವತಿಯರು, ಗೃಹಿಣಿಯರು ತಾವೇನೂ ಕಡಿಮೆ ಇಲ್ಲ ಎಂಬಂತೆ ದ್ವಿಚಕ್ರ ವಾಹನಗಳಲ್ಲಿ ಸ್ನೇಹಿತೆಯರ ಮನೆಗಳಿಗೆ ಹೋಗಿ, ಹೋಳಿ ಆಚರಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಮೊಟ್ಟೆ, ಟೊಮೆಟೋ ಎಸೆತ:ಜನವಸತಿ ಪ್ರದೇಶದ ಬಳಿ ನೆರೆಹೊರೆಯವರು, ಮಕ್ಕಳು ಹೋಳಿ ಆಚರಿಸಿದರೆ, ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಇತರೆ ಪದವಿ, ಪಿಯು, ಶಾಲಾ ಕಾಲೇಜು ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೋಳಿ ಆಚರಿಸಿದರು. ದಾವಣಗೆರೆ ಹಳೇ ಭಾಗ, ಹೊಸ ಭಾಗ, ಹೊಸ ಬಡಾವಣೆ ಪ್ರದೇಶಗಳು, ಗ್ರಾಮೀಣ ಪ್ರದೇಶದಲ್ಲೂ ಸಂಭ್ರಮದ ಹೋಳಿ ನಡೆಯಿತು. ಸಿಲ್ವರ್ ಪೇಂಟ್, ಗಾಢ ಬಣ್ಣಗಳು ಈಗ ಕಡಿಮೆಯಾಗಿದ್ದರೂ, ಅಲ್ಲಲ್ಲಿ ಮೊಟ್ಟೆ, ಟೊಮೆಟೋಗಳನ್ನು ತಲೆಗೆ ಒಡೆದು ಸಂಭ್ರಮಿಸಿದ್ದು ಸಾಮಾನ್ಯವಾಗಿತ್ತು.
ವಿದ್ಯಾನಗರ, ತರಳಬಾಳು ಬಡಾವಣೆ, ಕೆಟಿಜೆ ನಗರ, ಪಿ.ಜೆ. ಬಡಾವಣೆ, ಎಂಸಿ ಕಾಲನಿ, ವಿನೋಬನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಆಂಜನೇಯ ಬಡಾವಣೆ, ನಿಜಲಿಂಗಪ್ಪ ಬಡಾವಣೆ, ಎಸ್ಸೆಸ್ ಬಡಾವಣೆ, ಶಿವ ಪಾರ್ವತಿ ಬಡಾವಣೆ, ಜಯ ನಗರ, ಜೆ.ಎಚ್.ಪಟೇಲ್ ಬಡಾವಣೆ, ಶಾಬನೂರು, ಬಸಾಪುರ, ಆವರಗೆರೆ, ನಿಟುವಳ್ಳಿ, ಸರಸ್ವತಿ ಬಡಾವಣೆ, ಕೆಬಿ ಬಡಾವಣೆ, ಲೇಬರ್ ಕಾಲನಿ, ಭಗತ್ ಸಿಂಗ್ ನಗರ, ಭಾರತ ಕಾಲನಿ, ಸಿದ್ದವೀರಪ್ಪ ಬಡಾವಣೆ, ಗಡಿಯಾರ ಕಂಬ, ಹಳೆ ದಾವಣಗೆರೆ, ಹೊಂಡದ ಸರ್ಕಲ್, ಪಿಸಾಳೆ ಕಾಂಪೌಂಡ್, ಗಾಂಧಿ ವೃತ್ತ, ಕಾಯಿಪೇಟೆ, ದುಗ್ಗಮ್ಮನ ಪೇಟೆ, ವೀರ ಮದಕರಿ ನಾಯಕ ವೃತ್ತ, ದೇವರಾಜ ಅರಸು ಬಡಾವಣೆ, ಜಾಲಿ ನಗರ ಹೀಗೆ ಎಲ್ಲ ಕಡೆ ಜನರು ಬಣ್ಣದಲ್ಲಿ ಮಿಂದೆದ್ದರು.ಸೊಪ್ಪು-ತರಕಾರಿಗಳ ಬಣ್ಣ:
ಎಸ್.ಎಸ್. ಬಡಾವಣೆಯಲ್ಲಿ ದಶಕದಿಂದಲೂ ಸೌಮ್ಯ ಸತೀಶ ಧಾರವಾಡ ಸ್ನೇಹಿತೆಯರು ಸೊಪ್ಪು, ಹಣ್ಣು, ತರಕಾರಿಗಳನ್ನು ರುಬ್ಬಿ, ಅದರಲ್ಲಿ ನೈಸರ್ಗಿಕ ಬಣ್ಣಗಳನ್ನು ಮಾಡಿಕೊಂಡು ಹೋಳಿ ಆಚರಿಸುತ್ತಾ ಬಂದಿದ್ದಾರೆ. ಅಲ್ಲಿಯೂ ಮಕ್ಕಳಾದಿಯಾಗಿ ಹೋಳಿ ಆಚರಿಸುತ್ತಾರೆ. ಟೊಮೆಟೋ, ಕ್ಯಾರಟ್, ಬೀಟ್ರೂಟ್, ವಿವಿಧ ಬಗೆಯ ಸೊಪ್ಪುಗಳ ಬಳಸಿ ಬಣ್ಣ ತಯಾರಿಸಿ, ಪರಿಸರಸ್ನೇಹಿ ಹೋಳಿ ಆಚರಿಸಿದರು.ಮಧ್ಯಾಹ್ನ 12.30ರ ನಂತರ ಹೋಳಿ ಆಚರಣೆ ಕಡಿಮೆಯಾಗುತ್ತಾ ಬಂದಿತು. ಜನರು, ಮಕ್ಕಳು, ಮಹಿಳೆಯರು ಮನೆ ಕಡೆಗೆ ಹೆಜ್ಜೆ ಹಾಕಿದರು. ಕೆಲವರು ಭದ್ರಾ ಕಾಲುವೆ, ಹರಿಹರದ ತುಂಗಭದ್ರಾ ನದಿ, ತಮ್ಮ ತೋಟದ ಮನೆಗಳಿಗೆ ತೆರಳಿ, ಸ್ನಾನ ಮುಗಿಸುವುದರೊಂದಿಗೆ 2025ರ ಹೋಳಿ ಆಚರಣೆ ಸ್ಮರಣೀಯವಾಗಿಸಿದರು. ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ.
- - - -(ಫೋಟೋ ಬರಲಿವೆ)