ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹತ್ತಿ ಗಿರಣಿಗಳಿಗೆ ಒಂದು ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ ದಾವಣಗೆರೆ ಕೈಗಾರಿಕೆಗಳು, ಉದ್ಯಮಗಳ ಸ್ಥಾಪನೆಗೆ ಪೂರಕ ಜಿಲ್ಲೆಯಾಗಿದ್ದು, ಇಂದು ವಾಣಿಜ್ಯ, ಶೈಕ್ಷಣಿಕ ನಗರಿಯಾಗಿ ದೇಶದ ಜಿಡಿಪಿಗೆ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದರು.ನಗರದ ತ್ರಿಶೂಲ್ ಕಲಾ ಭವನದಲ್ಲಿ ಭಾನುವಾರ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ನಿಯಮಿತದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ, ಹೊನ್ನ ಮುಕುಟ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನಂತೆ ದೇಶದ ಪ್ರಗತಿಗೆ ದಾವಣಗೆರೆ ನಗರ, ಜಿಲ್ಲೆ ತನ್ನದೇಯಾದ ಕೊಡುಗೆ ನೀಡುತ್ತಿದೆ ಎಂದರು.
ದಾವಣಗೆರೆ ಹತ್ತಿ ಗಿರಣಿಗಳಿಗೆ, ಚಳ್ಳಕೆರೆ ಎಣ್ಣೆ ಮಿಲ್‌ಗಳಿಗೆ ಪ್ರಸಿದ್ಧಿ ಪಡೆದಂತಹವು. ಕೃಷಿ ಕ್ಷೇತ್ರಕ್ಕೂ ಈ ಜಿಲ್ಲೆ ಕೊಡುಗೆ ಅವಿಸ್ಮರಣೀಯವಾದುದು. ಅತೀ ಹೆಚ್ಚು ಬತ್ತ ಬೆಳೆಯುವ ಮೂಲಕ ರೈತರು ತಮ್ಮ ಕೊಡುಗೆ ನೀಡುತ್ತಿದ್ದಾರೆ. ದೇವರ ದಯೆಯಿಂದ ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಿದೆ. ಈ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿದ್ದು, ರೈತರು ಈ ಬಾರಿ 2 ಬೆಳೆ ಬೆಳೆಯುವ ಭರವಸೆ ಇದೆ ಎಂದರು.ಯಾವುದೇ ಸಹಕಾರಿ ಬ್ಯಾಂಕ್ ಮುನ್ನಡೆಸುವುದು ಅಷ್ಟೊಂದು ಸುಲಭವಲ್ಲ. ಒಂದು ಸಣ್ಣ ತಪ್ಪಾದರೂ ಚೇತರಿಕೆ ಕಷ್ಟವಾಗುತ್ತದೆ. ಅಂತಹದ್ದರಲ್ಲಿ ಇಲ್ಲಿ 1972-73ರಲ್ಲಿ ಸ್ಥಾಪಿಸಿದ ದಾ-ಹರಿಹರ ಅರ್ಬನ್ ಬ್ಯಾಂಕ್ ಮಾದರಿಯಾಗಿದೆ. ಕಳೆದ 7 ವರ್ಷದಲ್ಲಿ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ ಆರಾಧ್ಯ ನೇತೃತ್ವದಲ್ಲಿ ಹಿರಿಯ-ಕಿರಿಯ ನಿರ್ದೇಶಕರು, 12 ಸಾವಿರಕ್ಕೂ ಅದಿಕ ಸದಸ್ಯರನ್ನು ಕಟ್ಟಿಕೊಂಡು, ಬ್ಯಾಂಕನ್ನು ಲಾಭದಾಯಕವಾಗಿ ಮುನ್ನಡೆಸುತ್ತಿರುವುದು ಕಡಿಮೆ ಸಾಧನೆಯಲ್ಲ ಎಂದು ಶ್ಲಾಘಿಸಿದರು.
ಸಹಕಾರ ಕ್ಷೇತ್ರವನ್ನು ತೀರಾ ಹತ್ತಿರದಿಂದ ಬಲ್ಲವನು ನಾನು. ಆದರೆ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಕಾಲಿಡುವುದರೊಂದಿಗೆ ಸಹಕಾರಿ ಬ್ಯಾಂಕ್, ಸೊಸೈಟಿಗಳ ಕಥೆ ಏನಾಗುತ್ತಿದೆಯೆಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸಹಕಾರ ಕ್ಷೇತ್ರದಲ್ಲಿದ್ದವರು ಪರಿಶುದ್ಧವಾಗಿದ್ದು, ಉತ್ತಮವಾಗಿ ಕೆಲಸ ಮಾಡಿದರೆ ಸಹಕಾರ ಕ್ಷೇತ್ರ ದೇಶಕ್ಕೆ ಅನಿವಾರ್ಯವಾಗುತ್ತದೆ, ಸಣ್ಣ ಪುಟ್ಟ ವ್ಯಾಪಾರಸ್ಥರು, ಗುಡಿ, ಗೃಹ ಕೈಗಾರಿಕೆ, ಬಡ, ಮಧ್ಯಮ ವರ್ಗ, ಬೀದಿ ಬದಿ ವ್ಯಾಪಾರಸ್ಥರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದು ಕಷ್ಟವಾಗಿದೆ. ಆದರೆ ಅಂತಹ ಕೊರತೆ ಸಹಕಾರ ಬ್ಯಾಂಕ್, ಸೊಸೈಟಿಗಳು ನೀಗಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿವೆ. ದೇಶದ ಅಭಿವೃದ್ಧಿಗೂ ಸಹಕಾರ ಕ್ಷೇತ್ರದ ಸಿಂಹಪಾಲು ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗುಜರಾತ್, ಮಹಾರಾಷ್ಟ್ರದ ನಂತರ 3ನೇ ಸ್ಥಾನದಲ್ಲಿ ಕರ್ನಾಟಕದ ಸಹಕಾರ ಕ್ಷೇತ್ರ ಇದೆ. ಸುಮಾರು 40 ಸಾವಿರ ಕೋಟಿಗೂ ಅದಿಕ ವಹಿವಾಟು ಸಹಕಾರ ಕ್ಷೇತ್ರದಲ್ಲಿದೆ. 1972ರಲ್ಲಿ ಎನ್ಎಂಜೆಬಿ ಆರಾಧ್ಯ ಎಸ್.ಕೊಟ್ರಬಸಪ್ಪ ಸೇರಿದಂತೆ ಹಿರಿಯರು ಈ ಬ್ಯಾಂಕ್ ಆರಂಭಿಸಲು ಮುಂದಾದಾಗ ಸಾಕಷ್ಟು ಅಡಚಣೆ, ಅಡ್ಡಿ, ಆತಂಕ ಎದುರಾಗಿದ್ದವು. ಆದರೆ, ಅದ್ಯಾವುದನ್ನೂ ಲೆಕ್ಕಿಸದೇ ಕಟ್ಟಿದ ಬ್ಯಾಂಕ್ ಇಂದು ಮಾದರಿಯಾಗಿ, ಸುವರ್ಣ ಮಹೋತ್ಸವ ಆಚರಿಸುತ್ತಿದೆ. 80 ಸಾವಿರ ರು. ಶೇರು ಬಂಡವಾಳ, 274 ರು.ಲಾಭದೊಂದಿಗೆ ಶುರುವಾದ ಬ್ಯಾಂಕ್ ಈಗ 12 ಸಾವಿರಕ್ಕೂ ಅದಿಕ ಸದಸ್ಯರು, 287 ಕೋಟಿ ಸಾಲ ನೀಡಿ, 5.65 ಕೋಟಿ ಲಾಭ ಗಳಿಸಿದ್ದು ಮಹತ್ವದ ಅಂಶವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ಸೂಚಿಸಿದರು.
ಬ್ಯಾಂಕ್ ಅಧ್ಯಕ್ಷ ಎನ್.ಎಂ.ಮುರುಗೇಶ ಆರಾಧ್ಯ ಮಾತನಾಡಿ, ಪಟ್ಟಣ ಸಹಕಾರ ಬ್ಯಾಂಕ್ ಗಳು ದೇಶದ ಅಭಿವೃದ್ಧಿಗೆ ತಮ್ಮದೇಯಾದ ಕೊಡುಗೆ ನೀಡುತ್ತಿವೆ. ತಮ್ಮ ಬ್ಯಾಂಕ್‌ನಿಂದ ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳಿಗೆ ₹5 ಲಕ್ಷ ರು, ಎಂಸಿಸಿಬಿ ಬ್ಲಾಕ್‌ನ ಆಶ್ರಯ ಹಿರಿಯ ವನಿತೆಯರ ಧಾಮ ಹಾಗೂ ಎಂಸಿಸಿ ಕಾಲನಿಯ ವಿಕಲಚೇತನ ಹೆಣ್ಣು ಮಕ್ಕಳ ಶಾಲೆಗೆ ₹5 ಲಕ್ಷ. ದೇಣಿಗೆಯ ಚೆಕ್ ನೀಡುತ್ತಿದ್ದೇವೆ. ನಾವೆಲ್ಲಾ ನಿರ್ದೇಶಕರು, ಸದಸ್ಯರು ಚರ್ಚಿಸಿ, ಇಂತಹದ್ದೊಂದು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದು, ಈ ಮೂಲಕ ಸುವರ್ಣ ಮಹೋತ್ಸವಕ್ಕೆ ಅರ್ಥ ತಂದಿದ್ದೇವೆ ಎಂದರು.ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ವಿಪ ಸದಸ್ಯ ಕೆ.ಎಸ್.ನವೀನ, ಶಾಸಕ ಬಿ.ಪಿ.ಹರೀಶ, ಸಿ.ಡಿ.ಸುರೇಶ ಬಾಬು, ಚೌಡರೆಡ್ಡಿ ತೂಪಲ್ಲಿ, ಹಲ್ಕೋಡು ಹನುಮಂತಪ್ಪ, ಸುರೇಶ ಬಾಬು, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪುಂಡರೀಕಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಎಸ್.ಮಂಜುಳಾ ಇದ್ದರು.
ಹೊನ್ನ ಮುಕುಟ ಸಂಪಾದಕ ಬಾ.ಮ.ಬಸವರಾಜಯ್ಯ, ಬ್ಯಾಂಕ್‌ನ ಉಪಾಧ್ಯಕ್ಷೆ ಜಯಮ್ಮ ಪರಶುರಾಮಪ್ಪ, ನಿರ್ದೇಶಕರಾದ ಎಸ್.ಕೆ.ಪ್ರಭು ಪ್ರಸಾದ, ಅನುಪಾ ಡಾ.ವೀರೇಂದ್ರಸ್ವಾಮಿ, ಕೆ.ಎಂ.ಜ್ಯೋತಿ ಪ್ರಕಾಶ, ಎ.ಎಚ್.ಕುಬೇರಪ್ಪ ಕುರ್ಕಿ, ಎ.ಕೊಟ್ರೇಶ, ಪಿ.ಎಚ್.ವೆಂಕಪ್ಪ, ಕಿರುವಾಡಿ ವಿ.ಸೋಮಶೇಖರಪ್ಪ, ಶಂಕರ ಖಟಾವಕರ್, ಬಿ.ನಾಗೇಂದ್ರಾಚಾರಿ, ಉಮಾ ವಾಗೀಶ, ಅನಿತಾ ಕೋಗುಂಡಿ ಪ್ರಕಾಶ, ಎ.ಕೊಟ್ರೇಶ, ವಿಶಾಲ್ ಆರ್.ಸಂಘವಿ, ಆರ್.ವಿ.ಶಿರಸಾಲಿಮಠ, ಕಿರಣ್ ಆರ್.ಶೆಟ್ಟಿ, ಎನ್.ತುಳಸಿನಾಥ, ಕೆ.ಎಂ.ಶೈಲಾ ಹಾಲಸ್ವಾಮಿ ಕಂಬಳಿ, ಜಿ.ಸಿ. ವಸುಂಧರ ಭಾಗವಹಿಸಿದ್ದರು.