ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಾನುವಾರುಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಮೂರ್‍ನಾಲ್ಕು ಚಿರತೆಗಳಲ್ಲಿ ಒಂದು ಚಿರತೆಯು ಅರಣ್ಯ ಇಲಾಖೆಯವರು ಇಟ್ಟ ಬೋನಿಗೆ ಸಿಕ್ಕಿಬಿದ್ದಿರುವುದರಿಂದ ಇಲ್ಲಿನ ಸ್ಥಳೀಯರು ಸಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.ನಗರದ ಸಮೀಪ ಗವೇನಹಳ್ಳಿಯಲ್ಲಿರುವ ಗೆಂಡೆಕಟ್ಟೆ ಅರಣ್ಯಧಾಮದ ಬಳಿ ಕೋಳಿಫಾರಂ ಪಕ್ಕದಲ್ಲಿ ಇಡಲಾಗಿದ್ದ ಬೋನಿಗೆ ಮೂರು ವರ್ಷದ ಚಿರತೆ ತಡರಾತ್ರಿ ಸೆರೆ ಸಿಕ್ಕಿದೆ. ಹಗಲು- ರಾತ್ರಿ ಎನ್ನದೇ ಚಿರತೆ ಎಲ್ಲೆಂದರಲ್ಲಿ ತಿರುಗಾಡಿ ಸಾರ್ವಜನಿಕರಲ್ಲಿ ಭಯದ ವಾತವರಣ ನಿರ್ಮಾಣ ಮಾಡಿತ್ತು. ಇನ್ನು ಸಾಕು ಹಾಗೂ ಬೀದಿ ನಾಯಿಗಳನ್ನು ಕಚ್ಚಿಕೊಂಡು ಹೋದ ಚಿರತೆ ತನ್ನ ಆಹಾರ ಮಾಡಿಕೊಂಡಿತ್ತು. ಜೊತೆಗೆ ಗೋವುಗಳ ಮೇಲೆ ಎರಗಿ ಕಚ್ಚಿ ದಾಳಿ ಮಾಡುತ್ತಿತ್ತು. ಕೋಳಿಫಾರಂ ಬಳಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿದ್ದು. ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಇದನ್ನರಿತ ಅರಣ್ಯ ಇಲಾಖೆಯವರು ಪುರುಷೋತ್ತಮ್ ಎಂಬುವವರ ಕೋಳಿಫಾರಂ ಪಕ್ಕದಲ್ಲೇ ಬೋನು ಇಟ್ಟಿದ್ದರು. ಶನಿವಾರದಂದು ಬೆಳಗ್ಗೆ ಸುಮಾರು ಮೂರು ವರ್ಷದ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸೆರೆಯಾದ ಚಿರತೆಯನ್ನು ವಶಪಡಿಸಿಕೊಂಡರು.
ಗವೇನಹಳ್ಳಿಯ ಕೋಳಿಫಾರಂ ಮಾಲೀಕ ಸ್ವಾಮೀಗೌಡ, ಪಾಪಣ್ಣ, ಲೋಕೇಶ್, ಚೇತನ್ ಮಾಧ್ಯಮದೊಂದಿಗೆ ಮಾತನಾಡಿ, ಬೈಪಾಸ್ ಬಳಿ ಇರುವ ಗೆಂಡೆಕಟ್ಟೆ ಅರಣ್ಯ ರಸ್ತೆ ಇದಾಗಿದ್ದು, ಇಲ್ಲಿನ ಸುತ್ತಮುತ್ತಲೂ ನಾಲ್ಕೈದು ಗ್ರಾಮಗಳಿದ್ದು, ಇಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಬೆಳಗಿನ ಜಾವ ಒಂದು ಚಿರತೆಯು ಅರಣ್ಯ ಇಲಾಖೆಯವರು ಇಟ್ಟ ಬೋನಿಗೆ ಬಿದ್ದಿದೆ. ಇನ್ನು ಮೂರ್‍ನಾಲ್ಕು ಚಿರತೆಗಳಿದ್ದು, ಇವುಗಳ ಉಪಟಳದಿಂದ ಇಲ್ಲಿ ನಾವು ಕೆಲಸ ಮಾಡಲು ಆಗುತ್ತಿಲ್ಲ. ಚಿರತೆಯ ಭಯದಿಂದ ಕಾರ್ಮಿಕರು ಜಮೀನಿನ ಕೆಲಸಕ್ಕೆ ಬರುತ್ತಿಲ್ಲ. ಎರಡು ದಿನಗಳ ಹಿಂದೆ ಬೊಮ್ಮನಾಯಕನಹಳ್ಳಿಯಲ್ಲಿ ಹಸು ಮೇಲೆ ದಾಳಿ ಮಾಡಿದ್ದು, ನಮ್ಮ ಕೋಳಿಫಾರಂನಲ್ಲಿ ಸಾಕಿದ ನಾಯಿಯನ್ನು ತೆಗೆದುಕೊಂಡು ಹೋಗಿದೆ. ಅರಣ್ಯ ಇಲಾಖೆಯವರು ಉಳಿದ ಚಿರತೆಗಳನ್ನು ಸೆರೆಹಿಡಿಯಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.