ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ದಕ್ಷಿಣ ಕ್ಷೇತ್ರದ ಮುಸ್ಲಿಂ ಮುಖಂಡರು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಮಹಮ್ಮದ್ ಜಬೀವುಲ್ಲಾ, ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ನಮ್ಮ ಒಕ್ಕೊರಲ ಒತ್ತಾಯವಿದೆ ಎಂದರು.

ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ದಕ್ಷಿಣಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್‌, ಮುಸ್ಲಿಂ ಫಂಡ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಸಾದಿಕ್ ಪೈಲ್ವಾದ್, ಸೈಯದ್ ಖಾಲಿದ್ ಅಹಮ್ಮದ್‌ರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಮಸ್ಲಿಂ ಸಮುದಾಯಕ್ಕೆ ಉಪಚುನಾವಣೆಯಲ್ಲಿ ವರಿಷ್ಠರು ಅವಕಾಶ ಮಾಡಿಕೊಡಲಿ ಎಂದು ತಿಳಿಸಿದರು.

ದಿವಂಗತ ಶಾಮನೂರು ಶಿವಶಂಕರಪ್ಪನವರು ಇದ್ದಿದ್ದರೆ ನಮ್ಮ ಸಮದಾಯಕ್ಕೆ ಟಿಕೆಟ್ ಕೇಳುತ್ತಿರಲಿಲ್ಲ. ಹಿರಿಯರಾದ ಶಾಮನೂರು ಸ್ಪರ್ಧೆ ಮಾಡುವ ಇಚ್ಛೆ ವ್ಯಕ್ತಪಡಿಸಿದಾಗ ನಮ್ಮ ಸಮುದಾಯ ಸ್ಪಂದಿಸಿತ್ತು. ಈಗ ನಮ್ಮ ಸಮುದಾಯಕ್ಕೂ ಅವಕಾಶ ಮಾಡಿಕೊಡುವ ಸಂದರ್ಭ ಬಂದಿದೆ. ಒಂದು ವೇಳೆ ಉಪ ಚುನಾವಣೆಗೆ ಮುಸ್ಲಿಂಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಸಮಾಜದ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಂಡು, ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.


ಬರೀ ಓಟು ಹಾಕುವುದಕ್ಕಷ್ಟೇ ಮುಸ್ಲಿಂ ಸಮುದಾಯ ಬೇಕಾ? ನಮಗೂ ಒಂದು ಅ‍ವಕಾಶ ಕೊಡಿ. ದಶಕಗಳಿಂದಲೂ ಮುಸ್ಲಿಂ ಮುಖಂಡರು ಕಾಂಗ್ರೆಸ್‌ಗಾಗಿ ದುಡಿಯುತ್ತ ಬಂದಿದ್ದಾರೆ. ಅಲ್ಪಸಂಖ್ಯಾತರಲ್ಲೇ ಬಹುಸಂಖ್ಯಾತರಾದ ಮುಸ್ಲಿಂ ಪೈಕಿ ಯಾರಿಗಾದರೂ ಟಿಕೆಟ್ ನೀಡಲಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡುತ್ತೇವೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರವರೆ ನಮ್ಮ ಸಮಾಜದ ಮುಖಂಡರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ಮುಖಂಡರಾದ ಅಬ್ದುಲ್ ಸತ್ತಾರ್ ಸಾಬ್‌, ನಿಸಾರ್ ಅಹಮ್ಮದ್, ತಮನ್ನಾ ರಫೀಕ್, ದಾದಾಪೀರ್ ಇತರರು ಇದ್ದರು.