ಕಳಂಕಿತ ಸಚಿವ ನಾಗೇಂದ್ರ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು, ಅಲ್ಲಿಯವರೆಗೆ ಪಕ್ಷದ ಧರಣಿ ಮುಂದುವರಿಯಲಿದೆ.

ಸಚಿವ ಸಂಪುಟಕ್ಕೆ ಮತ್ತೆ ಸೇರ್ಪಡೆ ಖಂಡಿಸಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮತ್ತೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಹಾಗೂ ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ಆರಂಭವಾಯಿತು.

ಕಳಂಕಿತ ಸಚಿವ ನಾಗೇಂದ್ರ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು, ಅಲ್ಲಿಯವರೆಗೆ ಪಕ್ಷದ ಧರಣಿ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶದೊಂದಿಗೆ ಧರಣಿ ಆರಂಭಿಸಿದ ಮುಖಂಡರು, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಸಚಿವ ಬಿ.ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿ ಕೊಂಡಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಕಪ್ಪು ಚುಕ್ಕೆ. ಬಡವರಿಗೆ ಸಿಗಬೇಕಾದ ಮನೆಗಳು, ಯುವಕರಿಗೆ ಸಾಲ ಸೌಲಭ್ಯಗಳು, ಭೂ ರಹಿತ ರೈತರಿಗೆ ಭೂಮಿ ಕೊಡುವುದಕ್ಕೆ ಖರ್ಚಾಗ ಬೇಕಿದ್ದ ಹಣವು ತೆಲಂಗಾಣದ ಕಾಂಗ್ರೆಸ್ ಪಾರ್ಟಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಬಾರ್, ಬೇನಾಮಿ ಖಾತೆಗಳಿಗೆ ಕೋಟ್ಯಂತರ ರುಪಾಯಿಗಳನ್ನು ಕಳಿಸಿದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿಯು ಧ್ವನಿ ಎತ್ತಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 89 ಕೋಟಿ ರು.ಗಳ ಹಗರಣವಾಗಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದರು ಎಂದರು.

ನಾಗೇಂದ್ರ ಅವರ ವಿರುದ್ಧ ಆರೋಪಪಟ್ಟಿಯೂ ಇದೆ. ಆದರೂ ಅವರನ್ನು ಮತ್ತೆ ಮಂತ್ರಿ ಮಾಡಿರುವುದು ಅಕ್ಷಮ್ಯ ಅಪರಾಧ ವಾಗಿದೆ, ಮಹರ್ಷಿ ವಾಲ್ಮೀಕಿ ನಿಗಮದ ಪರಿಶಿಷ್ಟಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ನುಂಗಿದವರನ್ನೇ ಸಚಿವರನ್ನಾಗಿ ಮಾಡಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರೂ. 186 ಕೋಟಿ ಹಗರಣ ನಡೆದ ಕಾರಣಕ್ಕೆ ನಾಗೇಂದ್ರ ಮುಖ್ಯಮಂತ್ರಿಗಳು ಅವರು ರಾಜೀನಾಮೆ ನೀಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.

ನಾಗೇಂದ್ರ ಬದಲಿಗೆ ಅವರದೇ ಸಮುದಾಯದವರನ್ನು ಬೇಕಿದ್ದರೆ ಸಚಿವರಾಗಿ ಮಾಡಿ. ರಾಜೀನಾಮೆ ಪಡೆಯುವರೆಗೆ ಸದನದ ಹೊರಗೆ ಮತ್ತು ಒಳಗೆ ಜೆಡಿಎಸ್ ಜೊತೆ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳು ನಾಗೇಂದ್ರ ಅವರ ರಾಜೀನಾಮೆ ಪಡೆದು ಪರಿಶಿಷ್ಟ ಪಂಗಡಕ್ಕೆ ನ್ಯಾಯ ನೀಡಬೇಕು. ಇದೀಗ ಸಚಿವರಾಗಿ ನೇಮಕಗೊಂಡ ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ. ಅವರ ವಿರುದ್ಧ ಈಗಲೂ ತನಿಖೆ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಡೆಯಬೇಕು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಸ್ತುವಾರಿ ಬ್ಯಾಟರಂಗೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮುರಳೀಧರ್, ಮಧುಸೂರ್ಯ ನಾರಾಯಣರೆಡ್ಡಿ, ಕೆ.ಬಿ.ಮುರಳಿ,ಚಿಂತಾಮಣಿ ಮುಖಂಡ ವೇಣುಗೋಪಾಲ್,ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ನಿರ್ಮಲ, ಮಾಜಿ ಶಾಸಕ ಎಂ.ರಾಜಣ್ಣ ಇದ್ದರು.

ಸಿಕೆಬಿ-2 ಸಚಿವ ಬಿ.ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿಯಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಿದರು