ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಹೋರಾಟ
ಕನ್ನಡಪ್ರಭ ವಾರ್ತೆ ಬಳ್ಳಾರಿರಾಜ್ಯ ಸರ್ಕಾರ ಮಂಡಿಸುವ 2025ರ ಬಜೆಟ್‌ನಲ್ಲಿ ದೇವದಾಸಿಯರಿಗೆ ₹3 ಸಾವಿರ ಪಿಂಚಣಿ ಹೆಚ್ಚಳ ಮಾಡಬೇಕು. ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೆ 5 ಎಕರೆ ಜಮೀನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಸಂಘಟನೆಯ ರಾಜ್ಯ ಮುಖಂಡ ಯು.ಬಸವರಾಜ್ ಮಾತನಾಡಿ, ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳಿಂದ ವಂಚಿಸಲಾಗಿದೆ. ದೇವದಾಸಿಯರ ಪೈಕಿ ಬಹುತೇಕರು ತಳ ಸಮುದಾಯದವರಿದ್ದು, ಇವರ ಬದುಕಿನ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡುತ್ತಿಲ್ಲ. ಇವರಿಗೆ ನೀಡುತ್ತಿರುವ ಪಿಂಚಣಿ ಯಾವುದಕ್ಕೂ ಸಾಕಾಗುವುದಿಲ್ಲ. ಕೂಡಲೇ ಇವರಿಗೆ ಪಿಂಚಣಿ ಹೆಚ್ಚಳ ಮಾಡುವುದರ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ದೇವದಾಸಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ₹1.50 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಬೇಕು. ದೇವದಾಸಿಯರಿಗೆ ನಿವೇಶನ ನೀಡಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಹಾಗೂ ಸರ್ವೆ ಪಟ್ಟಿಯಿಂದ ಬಿಟ್ಟುಹೋಗಿರುವ ದೇವದಾಸಿಯರನ್ನು ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯನ್ವಯ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಈ ಕುರಿತು ಘೋಷಣೆ ಮಾಡುವವರೆಗೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.ಸಂಘಟನೆಯ ಪ್ರಮುಖರಾದ ಎ.ಸ್ವಾಮಿ, ಸತ್ಯಬಾಬು, ಎಚ್.ನಾಗರಾಜ್, ಎಚ್.ದುರುಗಮ್ಮ, ಮಾಳಮ್ಮ, ಹನುಮಕ್ಕ, ಸಂಗಮ್ಮ, ಹುಸೇನಮ್ಮ ಸೇರಿದಂತೆ ಸಂಘಟನೆಯ ನೂರಕ್ಕೂ ಹೆಚ್ಚು ಮಹಿಳೆಯರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.