ಕನ್ನಡಪ್ರಭ ವಾರ್ತೆ ಮಂಡ್ಯ

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರ ಕಾರ್ಯವೈಖರಿ ವಿರುದ್ಧ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರದಿಂದ ಜಿಪಂ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿ ವೇದಿಕೆ, ರೈತಸಂಘ, ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಿಇಒ ಕೆ.ಆರ್.ನಂದಿನಿ ಹಠಾವೋ- ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ’ ಎಂಬ ಘೋಷಣೆಗಳೊಂದಿಗೆ ಹೋರಾಟ ನಡೆಸಿದ್ದಾರೆ.

ಜಿಲ್ಲಾ ಪಂಚಾಯಿತಿ ಆವರಣದಿಂದ ೬೦ ಟನ್ ಕಬ್ಬಿಣ ಅಕ್ರಮವಾಗಿ ಸಾಗಣೆಯಾಗಿದೆ. ಈ ಬಗ್ಗೆ ದೂರು ನೀಡಿದರೂ ಇದುವರೆಗೂ ಸಿಇಓ ಅವರು ಸಮರ್ಪಕ ಉತ್ತರ ನೀಡಿಲ್ಲ. ಸರಿಯಾದ ತನಿಖೆ ನಡೆಸಿಲ್ಲ. ಸಿಸಿಟೀವಿ ದೃಶ್ಯಾವಳಿಗಳನ್ನು ನೀಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರಿ ವಾಹನಗಳ ದುರ್ಬಳಕೆ, ನರೇಗಾ ಯೋಜನೆಯಲ್ಲಿ ಎನ್‌ಎಂಆರ್‌ಎಸ್ ಹಾಜರಾತಿ, ಫೋಟೋಗಳಿಲ್ಲದೆ ಹಣ ವಿನಿಯೋಗ, ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯ ಅವ್ಯವಹಾರ ಕುರಿತು ಓಂಬುಡ್ಸ್‌ಮನ್ ವರದಿ ನೀಡಿದ್ದರೂ ಕ್ರಮ ಕೈಗೊಳ್ಳದೆ ಉದಾಸೀನ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು.


ಇದರ ಜೊತೆಗೆ ಸೆಸ್ಕಾಂಗೆ ದಂಡದ ರೂಪದಲ್ಲಿ ಪಾವತಿಸಲಾದ ಹಣದ ದುರ್ಬಳಕೆ, ಅರಣಿ ಗ್ರಾಮ ಪಂಚಾಯಿತಿಯಲ್ಲಿನ ಅಕ್ರಮಗಳ ಆರೋಪ, ಪ್ರತಿ ಸೋಮವಾರ ನಡೆಯಬೇಕಿದ್ದ ಕುಂದು- ಕೊರತೆ ಸಭೆಗಳ ರದ್ದು ಹಾಗೂ ಜಲ ಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ತನಿಖೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದಾರೆ ಎಂದು ದೂರಿದರು .

ಸಾರ್ವಜನಿಕರಿಂದ ಸಲ್ಲಿಕೆಯಾಗುತ್ತಿರುವ ದೂರುಗಳಿಗೆ ಸಮರ್ಪಕ ಸ್ಪಂದನೆ ಇಲ್ಲದೆ ಏಕಪಕ್ಷೀಯ ಧೋರಣೆ ಅನುಸರಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಆಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಎಲ್ಲ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಹಾಗೂ ಸಿಇಒ ಕೆ.ಆರ್. ನಂದಿನಿ ಅವರನ್ನು ತಕ್ಷಣವೇ ಮಂಡ್ಯ ಜಿಲ್ಲೆಯಿಂದ ವರ್ಗಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಗಾಣದಾಳು ಜಯರಾಮ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕಂಚನಹಳ್ಳಿ ದೇವರಾಜ್, ಅರಣಿ ವೇದಮೂರ್ತಿ, ರೈತ ಸಂಘದ ಮುಖಂಡರಾದ ಆನಂದ್‌ಕುಮಾರ್, ಡಾ. ವೆಂಕಟೇಶ್, ರುದ್ರೇಶ್, ಚೆಲುವಣ್ಣ, ಸ್ವಾಮಿಗೌಡ, ಮಂದಗೆರೆ ಭರತ್, ಎಂ.ಚಾಮರಾಜು ಇದ್ದರು.