ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀಳಗಿ ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬುಧವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ಬೀಳಗಿ
ಕಬ್ಬಿಗೆ ಪ್ರತಿ ಟನ್ಗೆ ₹5,500 ದರ ನಿಗದಿಪಡಿಸುವುದು ಸೇರಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ತಾಲೂಕು ಆಡಳಿತ ಸೌಧದ ಎದುರು ಅನಿರ್ದಿಷ್ಟ ಅಹೋರಾತ್ರಿ ಧರಣಿ ಮುಂದುವರಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ವಿಭಾಗೀಯ ಕಾರ್ಯದರ್ಶಿ ಡಿ.ಎಂ. ನದಾಫ್ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬುಧವಾರ ರಾತ್ರಿ ಆರಂಭಗೊಂಡ ಅಹೋರಾತ್ರಿ ಧರಣಿಯಲ್ಲಿ ಅವರು ಮಾತನಾಡಿದರು.
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವುದರ ಜತೆಗೆ ರೈತರ ವಿವಿಧ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಬೇಡಿಕೆಗಳು ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಸಿದ್ದರಾಮಯ್ಯ ಮಠಪತಿ ಮಾತನಾಡಿ, ಕಬ್ಬಿಗೆ ಪ್ರತಿ ಟನ್ಗೆ ₹5,500 ದರ ನಿಗದಿಪಡಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರಗಾಲದ ಸಂದರ್ಭದಲ್ಲಿ ಪ್ರತಿ ಹೆಕ್ಟೇರ್ಗೆ ನೀಡುತ್ತಿರುವ ₹2,500 ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ರೈತರಿಗೆ ಆಗಿರುವ ನಷ್ಟವನ್ನು ಪರಿಗಣಿಸಿ ಪ್ರತಿ ಹೆಕ್ಟೇರ್ಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ರೈತರನ್ನು ರಕ್ಷಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೈತರ ಹೊಲ, ಮನೆ ಸೇರಿದಂತೆ ಆಸ್ತಿಗಳನ್ನು ಬ್ಯಾಂಕ್ಗಳು ಅಥವಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹರಾಜು ಹಾಕದಂತೆ ಹಾಗೂ ರೈತರ ಮನೆಗಳಿಗೆ ಬೀಗ ಹಾಕದಂತೆ ತಡೆಯಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಜಿಎಲ್ಬಿಸಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳು ಹೂಳು ಮತ್ತು ಕಸದಿಂದ ತುಂಬಿಕೊಂಡಿದ್ದು, ಅವುಗಳನ್ನು ತಕ್ಷಣ ಸ್ವಚ್ಛಗೊಳಿಸಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗಂಗಪ್ಪ ಮಾದರ ಮಾತನಾಡಿ, ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಕಬ್ಬು ಬೆಳೆಗಾರರ ಹಿತ ಕಾಪಾಡಲು ಸೂಕ್ತ ದರ ನಿಗದಿಪಡಿಸುವುದರ ಜತೆಗೆ ರೈತರ ಇತರ ಬೇಡಿಕೆಗಳನ್ನೂ ಈಡೇರಿಸಬೇಕು. ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಬುಧವಾರ ರಾತ್ರಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರೊಂದಿಗೆ ಚರ್ಚಿಸಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಬೇಡಿಕೆಗಳು ಈಡೇರುವ ಕುರಿತು ಸ್ಪಷ್ಟ ಭರವಸೆ ದೊರೆಯದ ಹಿನ್ನೆಲೆಯಲ್ಲಿ ರೈತರು ಮನವಿಗೆ ಒಪ್ಪದೆ ಗುರುವಾರವೂ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದರು.
ಸ್ಥಳಕ್ಕೆ ಸಿಪಿಐ ಹನಮಂತ ಸಣಮನಿ ಹಾಗೂ ವಿದ್ಯುತ್ ಇಲಾಖೆಯ ಎಇಇ ಮಂಜುನಾಥ ಬೋಕಿ ಭೇಟಿ ನೀಡಿ ರೈತ ಮುಖಂಡರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳ ಪ್ರಯತ್ನ ಫಲ ನೀಡಲಿಲ್ಲ.ಜಂಗಪ್ಪ ಕಿಲಾರಿ, ಅಶೋಕ ದೇವಿನವರ, ರಾಮಣ್ಣ ಕುರಿ, ಮಂಜು ಕುಂಬಾರ, ಶ್ರೀಶೈಲ ಹೊಸಗೌಡ್ರ, ಲಚ್ಚಪ್ಪ ಕರಿಗಾರ, ಪರಮಾನಂದ ಬಿಷ್ಟನ್ನವರ, ಅಮಸಿದ್ದಪ್ಪ ಹೊಸಗೌಡ್ರ ಸಿದ್ದರಾಯಪ್ಪ ನಂದ್ಯಾಳ ಇದ್ದರು.