ಕೊಡಗು ಜಿಲ್ಲಾಡಳಿತ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ನಗರದ ಕೋಟೆ ಆವರಣದಲ್ಲಿ ನಡೆಯಿತು.

ಮಡಿಕೇರಿ: ಕೊಡಗು ಜಿಲ್ಲಾಡಳಿತ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ನಗರದ ಕೋಟೆ ಆವರಣದಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನ ಮತ್ತು ಕನಸುಗಳನ್ನು ಸ್ಮರಿಸುವ ಪವಿತ್ರ ದಿನವನ್ನು ಇಂದು ನಾವು ಆಚರಿಸುತ್ತಿದ್ದೇವೆ. ನಮ್ಮ ನೆಲದಿಂದ ಬ್ರಿಟಿಷರನ್ನು ಹೊರ ಹಾಕಲು ಅಸಂಖ್ಯಾತ ದೇಶ ಭಕ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ ಎಂದರು. ಕೊಡಗು ಎಂದರೆ ಕೇವಲ ಪ್ರಕೃತಿಯ ಸೌಂದರ್ಯವಲ್ಲ. ಇದು ಶೌರ್ಯ, ತ್ಯಾಗ, ದೇಶಪ್ರೇಮ ಮತ್ತು ಸಂಸ್ಕೃತಿಯ ಸಂಗಮವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ಕಾವೇರಿ ಹುಟ್ಟುವ ಈ ಪುಣ್ಯಭೂಮಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ತನ್ನದೇ ಆದ ಅಮೂಲ್ಯ ಕೊಡುಗೆ ನೀಡಿದೆ ಎಂದರು.ಕೊಡಗಿನ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ ಗುಡ್ಡೆಮನೆ ಅಪ್ಪಯ್ಯ ಗೌಡ ಅವರಂತಹ ವೀರರನ್ನು ನಾವು ಮರೆಯಲು ಸಾಧ್ಯವಿಲ್ಲ. ನಂತರ ಪಂದ್ಯಂಡ ಐ. ಬೆಳ್ಯಪ್ಪ ಅವರು ಗಾಂಧೀಜಿ ಅವರ ಸತ್ಯ, ಅಹಿಂಸೆ, ಸ್ವದೇಶಿ ಮತ್ತು ಸಾಮಾಜಿಕ ಸಮಾನತೆಯ ಸಂದೇಶವನ್ನು ಕೊಡಗಿನ ಜನರ ನಡುವೆ ಜನಾಂದೋಲನವಾಗಿಸಿದರು. ಅದಕ್ಕಾಗಿಯೇ ಅವರನ್ನು ಪ್ರೀತಿಯಿಂದ ಕೊಡಗಿನ ಗಾಂಧಿ ಎಂದು ಕರೆಯಲಾಯಿತು ಎಂದರು. ಕೊಡಗಿನ ಮಹಿಳೆಯರೂ ಸತ್ಯಾಗ್ರಹ ಮತ್ತು ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿ ಈ ಮಣ್ಣಿನ ಪರಂಪರೆಯ ಮೌಲ್ಯ ಹೆಚ್ಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಜೊತೆಗೆ ದೇಶದ ಗಡಿಗಳನ್ನು ಕಾಯುವ ಸೇನಾ ಪರಂಪರೆಯಲ್ಲಿಯೂ ಕೊಡಗು ಮುಂಚೂಣಿಯಲ್ಲಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಭಾರತದ ಸೇನಾ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಎರಡು ಮಹಾನ್ ಹೆಸರುಗಳು ಎಂದು ಸ್ಮರಿಸಿದರು.ಕೊಡಗು ಜಿಲ್ಲೆ ಪ್ರಕೃತಿ ಮತ್ತು ಅಧ್ಯಾತ್ಮ ಪರಸ್ಪರ ಬೆಸೆದುಕೊಂಡಿವೆ. ಅರಣ್ಯವನ್ನು ದೇವರಂತೆ ಕಾಣುವ ಸಂಸ್ಕೃತಿ, ನದಿಯನ್ನು ತಾಯಿಯಂತೆ ಪೂಜಿಸುವ ಮನೋಭಾವ ಮತ್ತು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಜೀವನ ಪದ್ಧತಿ ಕೊಡಗಿನ ವಿಶಿಷ್ಟ ಪರಂಪರೆ ಎಂದರು.

ಕೊಡಗಿನ ಕಾಫಿ ವಿಶ್ವದ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾಗಿ ಗುರುತಿಸಿಕೊಳ್ಳಬೇಕು. ಕೊಡಗು ಕಾಫಿ ಎಂಬ ಹೆಸರೇ ಜಾಗತಿಕ ಗುಣಮಟ್ಟದ ಸಂಕೇತವಾಗುವ ದಿನವನ್ನು ನಾವು ನಿರ್ಮಿಸಬೇಕು ಎಂದರು. ಕೊಡಗು ಈಗಾಗಲೇ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಆದರೆ ನಮ್ಮ ಗುರಿ ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಲ್ಲ. ಪರಿಸರ ಸ್ನೇಹಿ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಕಾಫಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಗಳನ್ನು ಸಮಗ್ರವಾಗಿ ಬೆಳೆಸಬೇಕು ಎನ್ನುವುದು ನನ್ನ ಗುರಿ ಎಂದು ಹೇಳಿದರು. ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ವೈಜ್ಞಾನಿಕ ಪರಿಹಾರಗಳು, ತ್ವರಿತ ಪರಿಹಾರ ಧನ, ಸುರಕ್ಷತಾ ಕ್ರಮಗಳು ಮತ್ತು ಅರಣ್ಯ ಸಂರಕ್ಷಣೆಯನ್ನು ಸಮನ್ವಯಗೊಳಿಸಬೇಕು. ಅರಣ್ಯವೂ ಉಳಿಯಬೇಕು, ಅರಣ್ಯದಂಚಿನ ಜನರೂ ನೆಮ್ಮದಿಯಿಂದ ಬದುಕಬೇಕು ಎನ್ನುವುದು ನಮ್ಮ ಪರಿಸರ ನ್ಯಾಯದ ಸಂಕಲ್ಪ ಎಂದರು.

ಮಡಿಕೇರಿ ನಗರದ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಸಾರುವ ನೃತ್ಯ ಪ್ರದರ್ಶನ ನಡೆಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಪಿ., ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಟಿ.ಎಂ. ಧರ್ಮಜ ಉತ್ತಪ್ಪ, ಏರ್ ಮಾರ್ಷಲ್ (ನಿವೃತ್ತ) ನಂದಾ ಕಾರ್ಯಪ್ಪ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್. ಹಾದಿಮನಿ, ಮಾಜಿ ಸೈನಿಕರು, ಜಿಲ್ಲಾ ಹಾಗೂ ತಾಲ್ಲೂಕಿನ‌ ಅಧಿಕಾರಿಗಳು, ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು.