Independence Day celebrations in various parts of Siddapura

ಸಿದ್ದಾಪುರ: ಗ್ರಾಪಂ, ಸಂಜೀವಿನಿ ಒಕ್ಕೂಟ ವಿ ಸೆವೆನ್ ಯುವಕ ಸಂಘ ಸೇರಿದಂತೆ ಪಟ್ಟಣದಲ್ಲಿ 80ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಗ್ರಾ.ಪಂ. ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿ ಸತೀಶ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂಜೀವಿನಿ ಒಕ್ಕೂಟ ವತಿಯಿಂದ ಸಿದ್ದಾಪುರದ ಅಮೃತ ಸರೋವರದಲ್ಲಿ ಸಂಘದ ಅಧ್ಯಕ್ಷೆ ತುಳಸಿ ಗಣಪತಿ ಧ್ವಜಾರೋಹಣ ನೆರವೇರಿಸಿದರು.

ಸ್ಥಳೀಯ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಂದ ಪಟ್ಟಣದಲ್ಲಿ ಪಥಸಂಚಲನ ನಡೆಯಿತು. ವಿ ಸೆವನ್ ಯುವಕ ಸಂಘದ ವತಿಯಿಂದಲೂ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಸಂಘದ ಹಿರಿಯ ಸದಸ್ಯ ಎಂ.ಕೆ. ಮಣಿ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 1857ರ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭಗೊಂಡ ಹೋರಾಟವು ಹಲವಾರು ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದ್ದು, ಅದರ ಫಲವಾಗಿ ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ ಎಂದರು.