ಇ- ಸ್ವತ್ತಿನ ಹೆಸರಿನಲ್ಲಿ ಅಧಿಕಾರಿಗಳಿಂದ ಹಗಲು ದರೋಡೆ

| Published : Jan 16 2025, 12:47 AM IST

ಸಾರಾಂಶ

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಇ- ಸ್ವತ್ತಿನ ಹೆಸರಿನಲ್ಲಿ ಪಾಲಿಕೆ ಅಧಿಕಾರಿಗಳು ಸಹ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಇ- ಸ್ವತ್ತಿನ ಹೆಸರಿನಲ್ಲಿ ಪಾಲಿಕೆ ಅಧಿಕಾರಿಗಳು ಸಹ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಲಿಕೆಯಲ್ಲಿ ಹಣ ನೀಡದಿದ್ದರೆ ಯಾವುದೇ ಕೆಲಸವಾಗುತ್ತಿಲ್ಲ. ಇ-ಸ್ವತ್ತು ಮಾಡಿಸಲು ಸಹ ತಿಂಗಳುಗಟ್ಟಲೇ ಕಾಯುವಂತಹ ಪರಿಸ್ಥಿತಿ ಉಂಟಾಗಿದೆ ಎಂದರು.ಈ ಹಿಂದೆ ಆಸ್ತಿಗಾಗಿ ಪ್ರಾಪರ್ಟಿ ಕಾರ್ಡ್ ಮಾಡಿಸಲೇಬೇಕಾಗಿತ್ತು. ಆಗ ಎಲ್ಲಾ ದಾಖಲೆಗಳನ್ನು ನೀಡಲಾಗಿತ್ತು. ಆದರೆ, ಇ-ಸ್ವತ್ತು ಮಾಡಿಸಲು ಈ ದಾಖಲೆಗಳಿದ್ದರೂ ಸಹ ಪುನಃ ಈಗ ದಾಖಲೆಗಳನ್ನು ನೀಡಬೇಕಾಗಿದೆ. ಇ-ಸ್ವತ್ತು ಮಾಡಿಸಲು ಸಾಕಷ್ಟು ಖರ್ಚಾಗುತ್ತಿದೆ. ಹಾಗೂ ಸಾಕಷ್ಟು ಲಂಚ ಸಹ ನೀಡಬೇಕಾಗಿದೆ. ಇದನ್ನು ಪ್ರಶ್ನಿಸಿದರೆ ಅಧಿಕಾರಿಗಳು ಆಯುಕ್ತರಿಗೆ ಮತ್ತು ಪ್ರಾದೇಶಿಕ ಆಯುಕ್ತರಿಗೆ ಹಣ ನೀಡಬೇಕೆಂದು ಹೇಳುತ್ತಿದ್ದಾರೆ ಎಂದು ದೂರಿದರು.ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲದಿರುವುದರಿಂದ ಅಧಿಕಾರಿಗಳಿಗೆ ತಾವಾಡಿದ್ದೇ ಆಟವಾಗಿದೆ. ಪಾಲಿಕೆಗೆ ಒಂದೂವರೆ ವರ್ಷವಾದರೂ ಇನ್ನೂ ಚುನಾವಣೆಯಾಗಿಲ್ಲ. ಇದರಿಂದಾಗಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ ಎಂದ ಅವರು, ನಗರದ ರಸ್ತೆಗಳಲ್ಲೆಲ್ಲಾ ಗುಂಡಿಗಳು ಬಿದ್ದಿವೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲಾಧಿಕಾರಿಗಳು ಕೂಡಲೇ ನಗರ ಸಂಚಾರ ಮಾಡಿ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದರು. ಹಿಂದೆ ೪೦ಕ್ಕೂ ಹೆಚ್ಚು ಸರ್ಕಾರಿ ನಗರ ಸಾರಿಗೆ ಬಸ್ ಸಂಚರಿಸುತ್ತಿದ್ದವು. ಈಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಂಚರಿಸುತ್ತಿವೆ. ಈ ಹಿಂದೆ ಇದ್ದ ಸರ್ಕಾರಿ ನಗರ ಸಾರಿಗೆ ಬಸ್‌ಗಳು ಭದ್ರಾವತಿ, ತೀರ್ಥಹಳ್ಳಿ, ಸಾಗರ ಮಾರ್ಗವಾಗಿ ಸಂಚರಿಸುತ್ತಿವೆ. ಇದರಿಂದ ಖಾಸಗಿ ನಗರ ಸಾರಿಗೆ ಬಸ್ ಅನ್ನೇ ಅವಲಂಬಿಸಿರುವುದರಿಂದ ಮಹಿಳೆಯರು ಉಚಿತ ಪ್ರಯಾಣದಿಂದ ವಂಚಿತರಾಗಿದ್ದಾರೆ ಎಂದರು.ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಹೆಚ್ಚಿನ ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡದಿದ್ದಲ್ಲಿ, ಡಿಪೋಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ನರಸಿಂಹ ಗಂಧದಮನೆ, ಎಸ್.ವಿ.ರಾಜಮ್ಮ, ರಘು, ದಯಾನಂದ್, ಗೋಪಿ ಮೊದಲಿಯಾರ್, ಸಿದ್ಧೇಶ್ ಎಸ್., ಸಂಜಯ್ ಕಶ್ಯಪ್, ಸೈಯದ್ ನಿಹಾಲ್, ಬೊಮ್ಮನಕಟ್ಟೆ ಮಂಜುನಾಥ್, ಸಿದ್ಧಪ್ಪ, ಸುನಿಲ್ ಗೌಡ ಇದ್ದರು.