ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ:
ಪಟ್ಟಣದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭಾಗಿಯಾಗಿದ್ದು, ಜಾಥಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಯಶಸ್ಸು ಕಂಡಿದೆ. ದೇಶದ ಸ್ವಾತಂತ್ರ್ಯನಂತರ ಅವಶ್ಯವಿರುವ ಎಲ್ಲ ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡ ಸಂವಿಧಾನ ನಮ್ಮ ಹೃದಯ ಮತ್ತು ತಾಯಿ ಇದ್ದಂತೆ. ಸಂವಿಧಾನ ಶಿಕ್ಷಣ, ಉದ್ಯೋಗ, ಸಮಾನತೆ, ಬದುಕು ಸಾಗಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ನಮ್ಮ ಹಕ್ಕಿಗೆ ಧಕ್ಕೆಯಾದರೇ ಅದರ ವಿರುದ್ಧ ಹೋರಾಡಲು ಸಂವಿಧಾನ ಅವಕಾಶ ನೀಡಿದೆ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ 2 ಮುಖಗಳಿದ್ದಂತೆ, ಎಲ್ಲರೂ ಒಂದಾಗಿ ಸಂವಿಧಾನದ ಆಶಯವನ್ನು ಈಡೇರಿಸಿ ಘನತೆಯಿಂದ ಬದುಕು ಸಾಗಿಸುವಂತೆ ತಿಳಿಸಿದರು.
ಪಟ್ಟಣಕ್ಕೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾಗೆ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ತಾಲೂಕು ಮಟ್ಟದ ಅಧಿಕಾರಿಗಳು, ಪಟ್ಟಣದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಹಾಗೂ ಪ್ರಗತಿಪರ,ದಲಿತ ಸಂಘಟನೆಗಳ ಮುಖಂಡರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗಿಯಾಗಿದ್ದರು. ನಂತರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಹಸೀಲ್ದಾರ್ ಪ್ರಕಾಶ ಸಿಂದಗಿ ಜೊತೆ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶುಭ ಹಾರೈಸಿದರು.ಪಟ್ಟಣದಲ್ಲಿ ಎಲ್.ಇ.ಡಿ ಪರದೆಯ ಮೂಲಕ ಸಂವಿಧಾನದ ಕುರಿತು ವಿಡಿಯೋ ಕ್ಲಿಪಿಂಗ್‌ಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಲಾಗಿದ್ದು, ನಂತರ ಸಂವಿಧಾನದ ಕುರಿತು ವಿವಿಧ ಸ್ಪರ್ಧೆಗಳನ್ನ ಆಯೋಜಿಸಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ತಾಲೂಕು ಕಚೇರಿಗೆ ಡಿಸಿ ಅನಿರೀಕ್ಷಿತ ಭೇಟಿ:
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಕಡತಗಳ ವಿಲೇವಾರಿ ಹಾಗೂ ಇ.ಆಫೀಸ್ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿ ಮಿನಿ ವಿಧಾನಸೌಧ ಕಟ್ಟಡದ ಸ್ಥಳ ಪರಿಶೀಲನೆ ಮಾಡಿದರು.ತಹಸೀಲ್ದಾರ್ ಪ್ರಕಾಶ ಸಿಂದಗಿ, ಪಪಂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸಮಾಜ ಕಲ್ಯಾಣಾಧಿಕಾರಿ ಶಿವಲಿಂಗಪ್ಪ ಹಚಡದ, ಉಪನ್ಯಾಸಕಆರ್.ಎಸ್.ಗಾಯಕವಾಡ, ಬಸವರಾಜ ಜಾಲವಾದ, ಕಂದಾಯ ನಿರೀಕ್ಷಕ ಸುರೇಶ ಮ್ಯಾಗೇರಿ ಸೇರಿದಂತೆ ಪಪಂ ಸದಸ್ಯರು, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.