ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಡೀಸಿ ಡಾ.ಕುಮಾರ ನಿರ್ದೇಶನ

| Published : Oct 31 2025, 02:00 AM IST

ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಡೀಸಿ ಡಾ.ಕುಮಾರ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕು ತಿಂಗಳಿಂದ ಕೈಗೆತ್ತಿಕೊಂಡಿರುವ ಪೌತಿ ಖಾತೆ ಆಂದೋಲನದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಎಸಿ ಶ್ರೀನಿವಾಸ್ ಅವರು ಸ್ವಯಂ ಪ್ರೇರಿತವಾಗಿ ಸುಮಾರು 6200 ಪೌತಿ ಖಾತೆಗಳನ್ನು ಆಫ್‌ಲೈನ್‌ನಲ್ಲಿ ಮಾಡಿದ್ದಾರೆ. ಇದನ್ನು ಆನ್‌ಲೈನ್‌ಗೆ ತರಬೇಕೆಂದು ಚರ್ಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಕಂದಾಯ ಇಲಾಖೆಯಲ್ಲಿ ಜನರ ಸಮಸ್ಯೆಗಳಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಉಪ ತಹಸೀಲ್ದಾರ್, ಎಲ್ಲಾ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಸರ್ವೇಯರ್‌ಗಳ ಸಭೆ ನಡೆಸಿ ಕೆಲ ವಿಷಯಗಳ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ತಾಲೂಕಿನಲ್ಲಿ ಶೇ.85ರಷ್ಟು ಆಧಾರ್ ಸೀಡಿಂಗ್ ಮಾಡಿ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಕೇವಲ ಶೇ.15ರಷ್ಟು ಮಾತ್ರ ಬಾಕಿ ಇದ್ದು, 4.34 ಲಕ್ಷ ಪಹಣಿಗಳ ಪೈಕಿ 3.64ಲಕ್ಷ ಪಹಣಿಗಳಿಗೆ ಜೋಡಣೆ ಮಾಡಲಾಗಿದೆ. ಇನ್ನುಳಿದ ಪಹಣಿದಾರರು ತಾಲೂಕಿನ ಹೊರಗಿರುವುದರಿಂದ ಆ ಪಹಣಿದಾರರು ಗ್ರಾಮಕ್ಕೆ ಬಂದಾಗ ಮಾಹಿತಿ ನೀಡಬೇಕೆಂದು ಸೂಚಿಸಿದ್ದೇನೆ ಎಂದರು.

ಕಳೆದ ನಾಲ್ಕು ತಿಂಗಳಿಂದ ಕೈಗೆತ್ತಿಕೊಂಡಿರುವ ಪೌತಿ ಖಾತೆ ಆಂದೋಲನದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಎಸಿ ಶ್ರೀನಿವಾಸ್ ಅವರು ಸ್ವಯಂ ಪ್ರೇರಿತವಾಗಿ ಸುಮಾರು 6200 ಪೌತಿ ಖಾತೆಗಳನ್ನು ಆಫ್‌ಲೈನ್‌ನಲ್ಲಿ ಮಾಡಿದ್ದಾರೆ. ಇದನ್ನು ಆನ್‌ಲೈನ್‌ಗೆ ತರಬೇಕೆಂದು ಚರ್ಚಿಸಲಾಗಿದೆ ಎಂದರು.

ತಾಲೂಕಿನ ಬಿಂಡಿಗನವಿಲೆ, ದೇವಲಾಪುರ ಮತ್ತು ಹೊಣಕೆರೆ ಹೋಬಳಿಗಳಲ್ಲಿ ಆಫ್‌ಲೈನ್‌ನಲ್ಲಿ 6 ಸಾವಿರ, ಆನ್‌ಲೈನ್‌ನಲ್ಲಿ 3 ಸಾವಿರ ಪೌತಿಖಾತೆಗಳಾಗಿವೆ. ತಾಲೂಕಿನಲ್ಲಿ ಒಟ್ಟು 9600 ಪೌತಿಖಾತೆಗಳಾಗಿವೆ. ಇನ್ನುಳಿದಂತೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳನ್ನು ಸ್ವಯಂ ಪ್ರೇರಿತವಾಗಿ ಪೌತಿಖಾತೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.

ಭೂ ಸುರಕ್ಷಾ ಯೋಜನೆಯಡಿ ತಾಲೂಕಿನಲ್ಲಿ 48 ಲಕ್ಷ ಪುಟಗಳ ದಾಖಲಾತಿಗಳು ರೆಕಾರ್ಡ್ ರೂಂನಲ್ಲಿವೆ. ಆ ಎಲ್ಲಾ ದಾಖಲಾತಿಗಳನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನಿಂಗ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ. ಈಗಾಗಲೇ 15ಲಕ್ಷ ಪುಟಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇದರಿಂದ ದೃಢೀಕೃತ ಪ್ರತಿ ಪಡೆಯುವ ಸಂದರ್ಭದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ಎಸಿ ಶ್ರೀನಿವಾಸ್ ಅವರು ಕಳೆದ ಮೂರ್‍ನಾಲ್ಕು ತಿಂಗಳಲ್ಲಿ ತಾಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ 2679 ಪಹಣಿ ತಿದ್ದುಪಡಿ ಮಾಡಿದ್ದು ಅಭಿನಂದಿಸುತ್ತೇನೆ. ತಾಲೂಕು ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ ಎಂದು ಕೆಆರ್‌ಎಸ್ ಪಕ್ಷದ ಮುಖಂಡರು ನನ್ನ ಗಮನಕ್ಕೆ ತಂದ ಹಿನ್ನಲೆಯಲ್ಲಿ ಎರಡು ತಿಂಗಳ ಬಯೋಮೆಟ್ರಿಕ್ ದಾಖಲೆಗಳ ಪ್ರಿಂಟ್ ತೆಗೆಸಿ ಪರಿಶೀಲಿಸಿದ್ದೇನೆ. ಬಯೋಮೆಟ್ರಿಕ್ ವ್ಯವಸ್ಥೆ ಇದೆ. ಆದರೆ, ಕೆಲ ಸಿಬ್ಬಂದಿ ನಿಗಧಿತ ಅವಧಿಯಲ್ಲಿ ಬಯೋಮೆಟ್ರಿಕ್ ನೀಡಿಲ್ಲ ಎಂದು ವರದಿಯಲ್ಲಿ ಕಂಡುಬಂದಿದೆ. ಒಬ್ಬ ಸಿಬ್ಬಂದಿ ಮಾತ್ರ ಬಯೋಮೆಟ್ರಿಕ್ ಹಾಕಿಲ್ಲ. ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.