ಕೆರೆಗಳ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಲು ಡೀಸಿ ಸೂಚನೆ

| Published : Mar 08 2024, 01:45 AM IST

ಸಾರಾಂಶ

ಜಿಲ್ಲಾ ವ್ಯಾಪ್ತಿಯ ನಗರ, ಗ್ರಾಮಾಂತರ ಪ್ರದೇಶಗಳ 100 ಕೆರೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಿದ್ಧತಾ ಕಾರ್ಯಗಳಿಗೆ ಶೀಘ್ರವಾಗಿ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲಾ ವ್ಯಾಪ್ತಿಯ ನಗರ, ಗ್ರಾಮಾಂತರ ಪ್ರದೇಶಗಳ 100 ಕೆರೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಿದ್ಧತಾ ಕಾರ್ಯಗಳಿಗೆ ಶೀಘ್ರವಾಗಿ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೆರೆ, ಕುಂಟೆ, ಕಟ್ಟೆ, ಜಲಾಶಯಗಳನ್ನು ಸಂರಕ್ಷಿಸುವ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಸಮ್ಮುಖದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು, ಜಾನುವಾರುಗಳು, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ವಿಶೇಷವಾಗಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುವ ಕೆರೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಕೆರೆಗಳ ಹಸ್ತಾಂತರ, ದಾಖಲೆಗಳ ನಿರ್ವಹಣೆ, ಅನುದಾನ ಬಳಕೆ ಇನ್ನಿತರ ಪೂರ್ವ ಯೋಜನೆ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕೆರೆಗಳಲ್ಲಿ ಮಳೆಗಾಲಕ್ಕೂ ಮೊದಲೇ ಹೂಳೆತ್ತುವ ಕಾಮಗಾರಿ ನಿರ್ವಹಿಸಿ, ಜಂಗಲ್ ಕಟಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳಿ, ಗಡಿ ಗುರುತು ಕಾರ್ಯ, ಇತರೆ ಕಾಮಗಾರಿಗಳಿಗೆ ಮುಂದಾಗಿ. ದುರಸ್ಥಿ ಕೆಲಸಗಳಿಗೆ ಸ್ಥಳೀಯವಾಗಿ ಲಭ್ಯವಾಗುವ ಯಂತ್ರೋಪಕರಣಗಳನ್ನು ಬಳಸಿಕೊಂಡು ವೇಗವಾಗಿ ಕೆಲಸ ಪೂರ್ಣಗೊಳಿಸಿ ಎಂದರು. ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಮೃತ್ ೨ರಡಿ ಅಭಿವೃದ್ಧಿಪಡಿಸಲಿರುವ ಕಾಮಗಾರಿಗಳ ವಿವರ ಅಂದಾಜು ಪಟ್ಟಿಯನ್ನು ಸಲ್ಲಿಸಬೇಕು. ಸಿಎಸ್‌ಆರ್ ಅನುದಾನ ಬಳಸಿಕೊಂಡು ಕೆರೆಗಳ ಅಭಿವೃದ್ಧಿ ಮಾಡಬಹುದಾಗಿದೆ. ನರೇಗಾ ಅಡಿ ಕೆಲಸ ಪ್ರಾರಂಭಿಸಿದ್ದಲ್ಲಿ ಆದ್ಯತೆ ಮೇರೆಗೆ ಮುಗಿಸಬೇಕು. ಕೆಲವು ಕೆರೆಗಳ ಆರ್‌ಟಿಸಿ ಇಂಡೀಕರಣ ಬಾಕಿಯಿದ್ದು, ತ್ವರಿತವಾಗಿ ಇತ್ಯರ್ಥಪಡಿಸಿ ಸರ್ವೆಗೆ ಬಾಕಿ ಇರುವ, ಒತ್ತುವರಿಯಾಗಿರುವ ಹಾಗೂ ಒತ್ತುವರಿ ತೆರವುಗೊಳಿಸಿರುವ, ಹಸ್ತಾಂತರಕ್ಕೆ ಬಾಕಿ ಇರುವ ಕೆರೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಪಟ್ಟಿಯೊಂದಿಗೆ ವರದಿ ಸಲ್ಲಿಸುವಂತೆ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಮಾತನಾಡಿ, ಇಲಾಖೆಗಳಿಗೆ ಹಸ್ತಾಂತರವಾಗಿರುವ ಕೆರೆಗಳನ್ನು ಮುಂದೆ ಒತ್ತುವರಿಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ನೀಡಿರುವ ನಿರ್ದೇಶನದಂತೆ ಅಧಿಕಾರಿಗಳು ಕ್ರಮವಹಿಸಿದರೆ ಜಿಲ್ಲೆಯ ಕೆರೆಗಳು ಉತ್ತಮ ಸ್ಥಿತಿಗೆ ಬರಲಿವೆ. ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದರು.

ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಉಪವಿಭಾಗಾಧಿಕಾರಿ ಎಂ. ಶಿವಮೂರ್ತಿ, ಕಾವೇರಿ ನೀರಾವರಿ ನಿಗಮ, ನೀರಾವರಿ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು,ತಾಪಂ ಇಒ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಮತ್ತಿತ್ತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.