ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿ ಮೃತದೇಹಗಳನ್ನು ಟೇಕಲ್ ಸರ್ಕಲ್ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಪ್ರಸಂಗ ಗುರುವಾರ ನಡೆದಿದೆ.ಘಟನೆ ವಿವರ:
ಬುಧವಾರ ರಾತ್ರಿ ಮಾಲೂರು ಟೇಕಲ್ ಮಧ್ಯೆ ಇರುವ ಚಿಕ್ಕಕುಂತೂರು ಬಳಿ ಟೇಕಲ್ ಸಮೀಪದ ಮಿಟ್ಟಿಗಾನಹಳ್ಳಿ ಗ್ರಾಮದ ಯುವಕರಾದ ಸಂದೀಪ್(27) ಸುಮನ್(26) ದ್ವಿಚಕ್ರ ವಾಹನದಲ್ಲಿ ತಮ್ಮ ಕಾರ್ಯ ಮುಗಿಸಿ ಊರಿಗೆ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿಗೆ ಅಪ್ಪಳಿಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಿಷಯ ತಿಳಿದ ಸಂಬಂಧಿಕರು ಮುಂಜಾನೆ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ತಮ್ಮ ಸ್ವಗ್ರಾಮ ಮಿಟ್ಟಿಗಾನಹಳ್ಳಿ ರಸ್ತೆ ಮಧ್ಯೆ ಇಟ್ಟು ಪೆಂಡಾಲ್ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾದರೂ ಅಧಿಕಾರಿಗಳಾರೂ ಸ್ಥಳಕ್ಕೆ ಬರಲಿಲ್ಲ.ನಂತರ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಲೂರು ಸರ್ಕಲ್ ಇನ್ಸ್‌ಪೆಕ್ಟರ್ ವಸಂತಕುಮಾರ್ ಮೃತರ ಕುಟುಂಬಗಳ ಜೊತೆ ಮಾತುಕತೆ ನಡೆಸಿದರು ಹಾಗೂ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಆದರೆ, ಪ್ರತಿಭಟನೆಕಾರರು ತಹಸೀಲ್ದಾರ್‌ರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಪೊಲೀಸರು ಬೇರೊಂದು ಮಾರ್ಗದಲ್ಲಿ ವಾಹನಗಳನ್ನು ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪ್ರತಿಭಟನೆಕಾರರು, ಮೃತ ದೇಹಗಳನ್ನು ಅಲ್ಲಿಂದ ಟೇಕಲ್‌ಗೆ ಸ್ಥಳಾಂತರಿಸಲು ವಾಹನವನ್ನು ತಂದರು. ಈ ಸಂದರ್ಭದಲ್ಲಿ ಪೋಲಿಸರಿಗೂ ಮತ್ತು ಮೃತರ ಕುಟುಂಬಸ್ಥರಿಗೆ ತಳ್ಳಾಟ - ನೂಕಾಟ, ಮಾತಿನ ಚಕಮಕಿ ನಡೆಯಿತು.
೫ ಕಿಮೀ ಮೃತದೇಹಗಳನ್ನು ಹೆಗಲ ಮೇಲೆ ಹೊತ್ತರು:ಇದ್ಯಾವುದನ್ನು ಪರಿಗಣಿಸದೆ ಮೃತದೇಹಗಳನ್ನು ಹೊತ್ತು ಪ್ರತಿಭಟನೆಕಾರರು ಸುಮಾರು ೫ ಕಿಮೀ ಮಿಟ್ಟಿಗಾನಹಳ್ಳಿಯಿಂದ ಟೇಕಲ್ ಸರ್ಕಲ್‌ವರೆಗೂ ಬಂದು ಅಲ್ಲಿಯೇ ಶವಗಳನ್ನು ಇಟ್ಟು ಸುಡು ಬಿಸಿಲಿನಲ್ಲೇ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ದಲಿತ ಯುವ ಮುಖಂಡ ಸಂದೇಶ್, ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಡಾ.ಪಿ.ನಾರಾಯಣಸ್ವಾಮಿ, ಟೇಕಲ್ ಕೃಷ್ಣಪ್ಪ (ಕಿಟ್ಟಿ) ಹಾಗೂ ಕುಟುಂಬಸ್ಥರು, ಇನ್ನೂ ಹಲವಾರು ಮಂದಿ ಟೇಕಲ್ ಸರ್ಕಲ್‌ನಲ್ಲಿ ಕೂತು ಟೇಕಲ್‌ನ ಕ್ರಷರ್ ಹಾವಳಿಗಳ, ಟಿಪ್ಪರ್‌ಗಳ ವಿರುದ್ಧ ಘೋಷಣೆ ಕೂಗಿ ನ್ಯಾಯ ಒದಗಿಸಬೇಕೆಂದು ಪಟ್ಟು ಹಿಡಿದರು. ಈ ಮಧ್ಯೆ ಸುಮಾರು ೨ ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಆಯಿತು.ಸ್ಥಳಕ್ಕೆ ಶಾಸಕ ಮತ್ತು ತಹಶೀಲ್ದಾರ್ ಬೇಟಿ:
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಕೆ.ವೈ.ನಂಜೇಗೌಡರು ಮಾತನಾಡಿ, ಘಟನೆ ನಡೆದ ರಾತ್ರಿ ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಕುಟುಂಬಗಳಿದ್ದು, ಸಾಂತ್ವನವನ್ನು ತಿಳಿಸಿ, ಇಬ್ಬರ ಕುಟುಂಬಗಳಿಗೆ ವಿಮಾ ಹಣವನ್ನು ಅಂದಾಜು ತಲಾ ೩೦ ಲಕ್ಷವನ್ನು ನೀಡುವಂತೆ ಮಾಡುತ್ತೇನೆ, ವೈಯಕ್ತಿಕವಾಗಿ ನಾನೂ ಸಹಾಯಹಸ್ತ ಚಾಚುತ್ತೇನೆ ಹಾಗೂ ಈ ವ್ಯಾಪ್ತಿಯ ಎಲ್ಲಾ ಕ್ರಷರ್ ಮಾಲೀಕರನ್ನು ಕರೆಸಿ ಈ ಕುಟುಂಬಗಳಿಗೆ ನೆರವು ಒದಗಿಸುತ್ತೇನೆಂದು ತಿಳಿಸಿದರು.ರ್‍ಯಾಶ್ ಡ್ರೈವಿಂಗ್, ಡಿಎಲ್ ಇಲ್ಲದೆ ಚಾಲನೆ, ಮಧ್ಯಪಾನ ಮಾಡಿ ವಾಹನ ಚಲಾಯಿಸುವಂತಹ ಪ್ರಕರಣಗಳು ಕಂಡು ಬಂದರೆ ಅದಕ್ಕೆ ನೇರ ಹೊಣೆ ಕ್ರಷರ್ ಮಾಲೀಕರೇ ಆಗುತ್ತಾರೆ. ಈ ಬಗ್ಗೆ ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ತಹಸೀಲ್ದಾರ್ ಕೆ.ರಮೇಶ್ ಜೊತೆಗಿದ್ದರು. ನಂತರ ಪ್ರತಿಭಟನೆ ಕೈಬಿಡಲಾಯಿತು.50 ಸಾವಿರ ಪರಿಹಾರ:
ಮಿಟ್ಟಿಗಾನಹಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರು ಅಪಘಾತಕ್ಕೀಡಾದ ಹಿನ್ನೆಲೆ ಕುಟುಂಬಗಳಿಗೆ ತಲಾ ೨೫ ಸಾವಿರ ರು. ಗಳನ್ನು ನೀಡುವುದಾಗಿ ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ಅಧ್ಯಕ್ಷ ಬಂಡೂರು ಅಗ್ರಹಾರದ ಡಾ.ಪಿ.ನಾರಾಯಣಸ್ವಾಮಿ ತಿಳಿಸಿ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದರು.