ಶಿವಸ್ಮರಣೆಗೆ ಸಜ್ಜಾದ ಶೈವ ಕ್ಷೇತ್ರಗಳು

| Published : Mar 08 2024, 01:45 AM IST

ಸಾರಾಂಶ

ಶಿವರಾತ್ರಿಯ ಹಿನ್ನೆಲೆಯಲ್ಲಿ ಶಿವಪೂಜೆಗೆ ಉತ್ತರ ಕನ್ನಡ ಜಿಲ್ಲೆಯ ಶೈವ ಕ್ಷೇತ್ರಗಳು ಅಣಿಯಾಗಿವೆ. ಗೋಕರ್ಣ ಹಾಗೂ ಮುರ್ಡೇಶ್ವರಗಳಿಗೆ ಶುಕ್ರವಾರ ಭಕ್ತರ ಮಹಾಪೂರವೇ ಹರಿದುಬರುವ ನಿರೀಕ್ಷೆ ಇದೆ.

ಕಾರವಾರ:

ಶಿವರಾತ್ರಿಯ ಹಿನ್ನೆಲೆಯಲ್ಲಿ ಶಿವಪೂಜೆಗೆ ಉತ್ತರ ಕನ್ನಡ ಜಿಲ್ಲೆಯ ಶೈವ ಕ್ಷೇತ್ರಗಳು ಅಣಿಯಾಗಿವೆ. ಗೋಕರ್ಣ ಹಾಗೂ ಮುರ್ಡೇಶ್ವರಗಳಿಗೆ ಶುಕ್ರವಾರ ಭಕ್ತರ ಮಹಾಪೂರವೇ ಹರಿದುಬರುವ ನಿರೀಕ್ಷೆ ಇದೆ.

ಜಾಗತಿಕ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವ ದಕ್ಷಿಣ ಕಾಶಿ ಗೋಕರ್ಣಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಈಗಾಗಲೆ ಗೋಕರ್ಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ, ಗೋವಾ ಮತ್ತಿತರ ರಾಜ್ಯಗಳಿಂದಲ್ಲದೆ, ಬೆಂಗಳೂರು, ಉತ್ತರ ಕರ್ನಾಟಕದಿಂದಲೂ ಸಾವಿರಾರು ಜನರು ಆಗಮಿಸುವ ಸಾಧ್ಯತೆ ಇದೆ.

ಗೋಕರ್ಣದಲ್ಲಿ ಭಕ್ತರಿಗೆ ಸರದಿಯಲ್ಲಿ ಆತ್ಮಲಿಂಗದ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಆತ್ಮಲಿಂಗ ದರ್ಶನಕ್ಕೆ ಗುರುವಾರ ರಾತ್ರಿಯಿಂದಲೆ ಭಕ್ತರು ಸರದಿಯಲ್ಲಿ ನಿಂತಿರುವುದು ಕಂಡುಬಂತು. ಶಿವರಾತ್ರಿ ಅಂಗವಾಗಿ ಐದು ದಿನಗಳಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಾಗರ ಆರತಿ, ಭರತನಾಟ್ಯ, ಶಿವತಾಂಡಲ, ಸಂಗೀತ ಕಾರ್ಯಕ್ರಮಗಳು ಕಳೆಗಟ್ಟಿವೆ. ಶಿವರಾತ್ರಿ ನಂತರ ಎರಡು ದಿನ ಬಿಟ್ಟು ಗೋಕರ್ಣದಲ್ಲಿ ರಥೋತ್ಸವ ನಡೆಯಲಿರುವುದರಿಂದ ಶಿವರಾತ್ರಿಗೆ ಬಂದ ಸಾವಿರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡು ಊರಿಗೆ ಮರಳುವುದು ವಾಡಿಕೆ.ಮುರ್ಡೇಶ್ವರದಲ್ಲೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ದೇವರ ದರ್ಶನ, ಪೂಜೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರಾಕೃತಿಕ ವಿಸ್ಮಯದ ತಾಣವಾದ ಯಾಣ, ಕವಳಾ ಗುಹೆಗಳಿಗೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಉಳವಿ ಚನ್ನಬಸವೇಶ್ವರ ದೇಗುಲದಲ್ಲೂ ಸಾವಿರಾರು ಭಕ್ತರು ಪೂಜೆ ಸಲ್ಲಿಸಲಿದ್ದಾರೆ. ಜಿಲ್ಲೆಯ ಹಲವೆಡೆ ಇರುವ ಶಿವ ದೇಗುಲಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಪೂಜೆ, ಪುನಸ್ಕಾರಗಳು ನೆರವೇರಲಿವೆ.

ಶಿವರಾತ್ರಿ ಅಂಗವಾಗಿ ಮುರ್ಡೇಶ್ವರದಲ್ಲಿ ಜಿಲ್ಲಾಡಳಿತ ಜಾಗರಣೆ ಉತ್ಸವ ಹಮ್ಮಿಕೊಂಡಿದೆ. ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆ ತನಕ ನಿರಂತರವಾಗಿ ಭಕ್ತಿ ಸಂಗೀತ, ಯಕ್ಷಗಾನ ಕಾರ್ಯಕ್ರಮವನ್ನು ರಾಷ್ಟ್ರ, ರಾಜ್ಯ ಮಟ್ಟದ ಪ್ರಸಿದ್ಧ ಕಲಾವಿದರು ನೀಡಲಿದ್ದಾರೆ. ಯಾಣದಲ್ಲಿ ಶಿವರಾತ್ರಿ ಉತ್ಸವಕ್ಕೆ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ 10 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಗ್ರಾಮ ಪಂಚಾಯಿಸಿ ಸದಸ್ಯ ರಾಜೀವ ಕೆ. ಹೇಳಿದರು.