ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಸಚಿವ ದಿನೇಶ್ ಗುಂಡೂರಾವ್

| Published : Mar 08 2024, 01:45 AM IST

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಸಚಿವ ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಆಸ್ಪತ್ರೆ ಕಟ್ಟುವುದು ಸುಲಭ. ಆದರೆ, ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸುವುದು ಕಷ್ಟ. ಮುಂದೆ ಹಲವು ಸವಾಲುಗಳಿವೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ, ಶುಶ್ರೂಷಕರ, ಫಾರ್ಮಸಿಸ್ಟ್‌ಗಳ ಕೊರತೆಯಿದೆ. ಇವುಗಳನ್ನು ತುಂಬಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಭಾರತೀನಗರ

ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ 30 ಹಾಸಿಗೆಗಳ ಮೇಲಂತಸ್ತಿನ ಒಳರೋಗಿಗಳ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಖಾಸಗಿ ಆಸ್ಪತ್ರೆಗಳ ರೀತಿಯಲ್ಲೇ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಹೊಸ ಆಸ್ಪತ್ರೆ ಕಟ್ಟುವುದು ಸುಲಭ. ಆದರೆ, ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸುವುದು ಕಷ್ಟ. ಮುಂದೆ ಹಲವು ಸವಾಲುಗಳಿವೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ, ಶುಶ್ರೂಷಕರ, ಫಾರ್ಮಸಿಸ್ಟ್‌ಗಳ ಕೊರತೆಯಿದೆ. ಇವುಗಳನ್ನು ತುಂಬಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.

ಸಂಸದೆ ಸುಮಲತಾ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಜನರು ಆರೋಗ್ಯ ಸೇವೆ ಪಡೆಯುವುದು ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಬುದನ್ನು ಗಮನಿಸಿ ಈ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸೌಲಭ್ಯಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ವೇದಿಕೆಯಲ್ಲಿ ಡಿಎಚ್‌ಒ ಡಾ.ಕೆ.ಮೋಹನ್, ಟಿಎಚ್‌ಒ ರವೀಂದ್ರ, ಡಾ.ಕೆ.ಎನ್.ಜಗದೀಶ್, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಗ್ರಾ.ಪಂ ಅಧ್ಯಕ್ಷ ಕೌಶಲ್ಯ ಅರ್ಕೇಶ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಡಿಎಚ್‌ಒಗೆ ಸಂಸದೆ ಸುಮಲತಾ ತರಾಟೆ:

ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ 30 ಹಾಸಿಗೆಗಳ ಮೇಲಂತಸ್ತಿನ ಒಳರೋಗಿಗಳ ಕಟ್ಟಡದ ಉದ್ಘಾಟನಾ ಸಮಾರಂಭದ ವೇದಿಕೆಯ ಬ್ಯಾನರ್‌ನಲ್ಲಿ ಸಚಿವರಾದ ಚಲುವರಾಯಸ್ವಾಮಿ, ದಿನೇಶ್‌ ಗುಂಡೂರಾವ್, ಶಾಸಕ ಉದಯ್ ಭಾವಚಿತ್ರ ಹಾಕಿ ಸಂಸದೆ ಸುಮಲತಾ ಭಾವಚಿತ್ರ ಹಾಕದಿರುವ ಬಗ್ಗೆ ಸಂಸದೆ ಸುಮಲತಾ ಹಾಗೂ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದೆ ಸುಮಲತಾ ಡಿಎಚ್‌ಒ ಡಾ.ಕೆ.ಮೋಹನ್ ಅವರಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದ ವೇದಿಕೆಗಳಲ್ಲಿ ಸ್ಟಾರ್ ಚಂದ್ರು ಭಾಗವಹಿಸಲಿ. ನಮ್ಮ ಮತ್ತು ಬೆಂಬಲಿಗರ ಆಕ್ಷೇಪಣೆ ಇಲ್ಲ. ಆದರೆ, ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೋ ಬೇಡವೋ ಎಂಬ ಕನಿಷ್ಠ ತಿಳಿವಳಿಕೆ ಸ್ಟಾರ್ ಚಂದ್ರು ಅವರಿಗಾದರೂ ಬೇಡವೆ ಮತ್ತು ವೇದಿಕೆ ಮೇಲೆ ಆಹ್ವಾನಿಸಿರುವ ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಬುದ್ಧಿ ಬೇಡವೇ ಎಂದು ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.