ನದಿ ನೀರು ಬಳಕೆ ನಿಷೇಧಾಜ್ಞೆ ಹಿಂಪಡೆಯಲು ಕಾಫಿ ಬೆಳೆಗಾರರ ಆಗ್ರಹ

| Published : Mar 08 2024, 01:45 AM IST

ನದಿ ನೀರು ಬಳಕೆ ನಿಷೇಧಾಜ್ಞೆ ಹಿಂಪಡೆಯಲು ಕಾಫಿ ಬೆಳೆಗಾರರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಾಫಿ ಕೃಷಿಯು ಪುಟ್ಟ ಜಿಲ್ಲೆಯಾದ ಕೊಡಗಿನ ಬೆಳೆಗಾರರ ಜೀವನಾಡಿಯಾಗಿದೆ. ರೈತರು ಮಾರ್ಚ್ ತಿಂಗಳಲ್ಲಿ ಮಳೆ ಸಿಗದಿದ್ದರೆ ನೀರಾವರಿ ಮೂಲಕ ತಮ್ಮ ಕಾಫಿ ಗಿಡ ಹಾಗೂ ಇಳುವರಿ ರಕ್ಷಿಸಿಕೊಂಡು ತಮ್ಮ ಜೀವನ ನಡೆಸುತ್ತಾರೆ. ಜಿಲ್ಲಾಧಿಕಾರಿ ನದಿ ನೀರು ಬಳಕೆಗೆ ನಿರ್ಬಂಧ ಹೇರಿದ್ದು ಬೆಳೆಗಾರರಿಗೆ ಸಮಸ್ಯೆಯಾಗಿದೆ ಎಂದು ಕಾಫಿ ಬೆಳೆಗಾರರು ಆಕ್ಷೇಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು ಕೊಡಗು ಜಿಲ್ಲೆಯಾದ್ಯಂತ ಇರುವ ನದಿ ಹಾಗೂ ನದಿ ಮೂಲಗಳಿಂದ ಮೋಟಾರ್ ಪಂಪ್ ಸೆಟ್ ಬಳಸಿ ಕೃಷಿ ಚಟುವಟಿಕೆ ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಿಂದ ಕಾಫಿ ಬೆಳೆಗಾರರು ತೀವ್ರ ರೀತಿಯ ಸಂಕಷ್ಟ ಎದುರಿಸುವಂತೆ ಆಗಿದೆ. ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಯವಕಪಾಡಿ ಗ್ರಾಮದ ಕಾಫಿ ಬೆಳೆಗಾರ ಪಾಂಡಂಡ ನರೇಶ್ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಕೃಷಿಯು ಪುಟ್ಟ ಜಿಲ್ಲೆಯಾದ ಕೊಡಗಿನ ಬೆಳೆಗಾರರ ಜೀವನಾಡಿಯಾಗಿದೆ. ರೈತರು ಮಾರ್ಚ್ ತಿಂಗಳಲ್ಲಿ ಮಳೆ ಸಿಗದಿದ್ದರೆ ನೀರಾವರಿ ಮೂಲಕ ತಮ್ಮ ಕಾಫಿ ಗಿಡ ಹಾಗೂ ಇಳುವರಿ ರಕ್ಷಿಸಿಕೊಂಡು ತಮ್ಮ ಜೀವನ ನಡೆಸುತ್ತಾರೆ. ಕಾಫಿ ಉದ್ದಿಮೆ ಲಕ್ಷಗಟ್ಟಲೆ ಆರ್ಥಿಕ ವಹಿವಾಟು ನೀಡುತ್ತಿದೆ ಎಂದು ನೆನಪಿಸಿದರು.

ಲಕ್ಷಾಂತರ ಕಾರ್ಮಿಕರು ಕಾಫಿ ಕೃಷಿ ಅವಲಂಬಿಸಿ ತಮ್ಮ ಜೀವನ ಸಾಗಿಸುತ್ತಾರೆ. ಕೊಡಗಿನ ಆರ್ಥಿಕ ಪರಿಸ್ಥಿತಿ ಈ ಕಾಫಿ ಕೃಷಿಯನ್ನು ನಂಬಿದೆ. ದೇಶದ ಆರ್ಥಿಕ ಪರಿಸ್ಥಿತಿಗೂ ಕಾಫಿ ಕೃಷಿಯು ಉದ್ಯಮ ಹಲವು ವರ್ಷಗಳಿಂದ ಕೈಜೋಡಿಸುತ್ತಾ ಬಂದಿದೆ. ಪ್ರತಿಯೊಬ್ಬ ರೈತರೂ ಮಳೆ ಇಲ್ಲದಿದ್ದರೆ ಕೇವಲ 10-15 ದಿನಗಳವರೆಗೆ ಮಾತ್ರ ನೀರು ಬಳಸುತ್ತಾರೆ. ಅದು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಎಂದು ಅವರು ವಿವರಿಸಿದರು.

ಒಂದೆಡೆ ಜಿಲ್ಲೆಯ ಹಲವು ರೆಸಾರ್ಟುಗಳು ಜಲಮೂಲಗಳನ್ನು ತಿರುಗಿಸಿದ್ದು, ಪಶ್ಚಿಮ ಘಟ್ಟ ಭಾಗದಲ್ಲಿ ಎಕರೆ ಕಟ್ಟಲೆ ಕಾಫಿ ಗಿಡಗಳನ್ನು ಕಡಿದು ವಾಣಿಜ್ಯೋದ್ಯಮಿಗಳು ಕಟ್ಟಡಗಳನ್ನು ಕಟ್ಟುವಂತೆ ಅನುಮತಿ ನೀಡಿದ್ದು ರೈತರ ವಿಷಯದಲ್ಲಿ ಮಾತ್ರ ಈ ರೀತಿ ಧೋರಣೆ ತಳೆದಿರುವುದು ಸರಿಯಲ್ಲ ಎಂದರು.

ಮತ್ತೋರ್ವ ಕಾಫಿ ಬೆಳೆಗಾರ ಅಂಜಪರವಂಡ ಚೋಮಣಿ ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರ ರೈತರು ಹೊಳೆ, ನದಿ ಮೂಲಗಳಿಂದ ನೀರು ಹಾಯಿಸುವಂತಿಲ್ಲ. ಸರ್ಕಾರ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಿ ಕೊಡಲಿ. ಇದರಿಂದ ರೈತರಿಗೂ, ಜಾನುವಾರುಗಳಿಗೂ ಪ್ರಯೋಜನವಾಗುತ್ತದೆ ಎಂದರು.

ಕೊಡಗಿನಾದ್ಯಂತ ಕಾಫಿ ಕೃಷಿ ಜನರ ಜೀವನಾಡಿ.ಇಳುವರಿ ಹೆಚ್ಚಿಸಿಕೊಳ್ಳಲು ನೀರಿನ ಮೂಲಗಳನ್ನು ರೈತರು ಬಳಸುತ್ತಿದ್ದಾರೆ. ಹಲವು ವರ್ಷಗಳಿಂದ ಕೊಡಗಿನ ಬೆಳೆಗಾರರು ಪ್ರಕೃತಿಯನ್ನು ಪೋಷಿಸಿ ಕೊಂಡು ಬರುತ್ತಿದ್ದು ಜಿಲ್ಲೆಯಲ್ಲಿ ಶೇ.90ರಷ್ಟು ಭತ್ತದ ಗದ್ದೆ ನಶಿಸಿದೆ. ಅದೇ ಪರಿಸ್ಥಿತಿ ಕಾಫಿ ಕೃಷಿಗೂ ಬರಲಿದೆ. ಆದುದರಿಂದ ಸರ್ಕಾರ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಯವಕಪಾಡಿ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ, ಕುಂಜಿಲ ಗ್ರಾಮದ ಕಾಫಿ ಬೆಳೆಗಾರ ಮೊಹಮ್ಮದ್ ಹಾಜಿ, ಸತ್ಯಶೋಧನಾ ಸಮಿತಿ ಸದಸ್ಯ ಕೇಟೋಳಿರ ಸನ್ನಿ ಸೋಮಣ್ಣ ಪಾಲ್ಗೊಂಡಿದ್ದರು.