ರಾಮನಗರ: ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಯುವ ಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಹಾಗೂ ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಮನಗರ: ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಯುವ ಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಹಾಗೂ ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಮನ್ವಯ ಸಮಿತಿ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಇದೂವರೆಗೂ 33 ಕಾರ್ಯಾಚರಣೆಗಳನ್ನು ನಡೆಸಿ, 378 ಕೋಟ್ಪಾ ಕಾಯ್ದೆ ಉಲ್ಲಂಘನೆಯ ಪ್ರಕರಣಗಳನ್ನು ದಾಖಲು ಮಾಡಿ, ಒಟ್ಟು 44,350 ರು.ಗಳ ದಂಡ ವಿಧಿಸಲಾಗಿದೆ. ಅದೇ ರೀತಿಯಲ್ಲಿ ಪ್ರತೀ ತಾಲೂಕುಗಳು, ನಗರ ಸ್ಥಳೀಯ ಸಂಸ್ಥೆಗಳು ಕಾರ್ಯಾಚರಣೆಗಳನ್ನು ನಡೆಸಿ, ಪ್ರಕರಣ ದಾಖಲು ಮಾಡಿ ದಂಡ ವಿಧಿಸುವಂತೆ ಸೂಚಿಸಿದರು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ಅಧಿಕೃತವಾಗಿ ಮಾರಾಟ ಮಾಡಲು ಟೊಬ್ಯಾಕೊ ವೆಂಡರ್ ಲೈಸೆನ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಪರವಾನಗಿ ಇಲ್ಲದೇ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ದಂಡ ವಿಧಿಸಲಾಗುವುದು. ಈ ಕುರಿತಂತೆ ನಗರ ಹಾಗೂ ಗ್ರಾಮೀಣ ಭಾಗದ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಂಡ ಸಂಗ್ರಹ ಪುಸ್ತಕವನ್ನು ನೀಡಲಾಗಿದೆ. ಅದರಂತೆ ಕೋಟ್ಪಾ ಕಾರ್ಯಾಚರಣೆ ಕೈಗೊಂಡು ಟೊಬ್ಯಾಕೊ ವೆಂಡರ್ ಲೈಸೆನ್ಸ್ ಪಡೆಯದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ-ಮಳಿಗೆಗಳ ಮೇಲೆ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿ ಸಂಬಂಧಿಸಿದ ಮಳಿಗೆಯ ವ್ಯಾಪಾರ ಪರವಾನಗಿ ರದ್ದು ಮಾಡಲು ಕ್ರಮ ವಹಿಸಬೇಕೆಂದು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪಂಚಾಯತ್ ಅಭವೃದ್ಧಿ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಸುಗ್ಗನಹಳ್ಳಿ ಗ್ರಾಪಂ ಈಗಾಗಲೇ ತಂಬಾಕು ಮುಕ್ತ ಗ್ರಾಮ ಎಂದು ಘೋಷಣೆಯಾಗಿದೆ, ಅದೇ ರೀತಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನಿಷ್ಠ ಎರಡು ಗ್ರಾಪಂ ವ್ಯಾಪ್ತಿಯ ಗ್ರಾಮವಾದರೂ ತಂಬಾಕು ಮುಕ್ತವಾಗಬೇಕು. ಈ ದಿಸೆಯಲ್ಲಿ ಪಿಡಿಒಗಳು ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ 1,529 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಘೋಷಿಸಿದ್ದು ಸದರಿ ಶಾಲೆಗಳ ಆವರಣದಲ್ಲಿ ಧೂಮಪಾನ ನಿಷೇಧಿಸಿದೆ ಹಾಗೂ ತಂಬಾಕು ಮುಕ್ತ ವಲಯ ಎಂಬ ಗೋಡೆ ಬರಹ ನಿಯಮಾನುಸಾರ ಬರೆಸಲಾಗಿರುತ್ತದೆ. ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿದ 2025-2026ನೇ ಸಾಲಿನಲ್ಲಿ 90 ಶಾಲಾ ಹಾಗೂ ಕಾಲೇಜುಗಳಲ್ಲಿ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಟಾ ಕಾಯ್ದೆ-2003ರ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿರುವ ಶಾಲಾ ಕಾಲೇಜುಗಳ ಆವರಣದಲ್ಲಿ ಸೆಕ್ಷನ್ 6(ಬಿ)ರಂತೆ 100 ಗಜ/ಯಾರ್ಡ್ ಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು 3-2 ಅಡಿ ಅಳತೆಯ ನಾಮಫಲಕವನ್ನು ಕಡ್ಡಾಯವಾಗಿ ಸಂಸ್ಥೆ ಪ್ರವೇಶ ದ್ವಾರದಲ್ಲಿ ಪ್ರದರ್ಶನ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಶಾಲಾ-ಕಾಲೇಜಿನ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥ ಮಾರುವುದು ಕಂಡು ಬಂದರೆ ಕಾನೂನು ರೀತಿಯ ಕಠಿಣ ಕ್ರಮ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿಯೂ ತಂಬಾಕು ಉತ್ಪನ್ನ ಮಾರಾಟವಾಗುವ ಬಗ್ಗೆ ಎಚ್ಚರ ವಹಿಸಬೇಕು ಹಾಗೂ ಅಲ್ಲಿಯೂ ದಾಳಿಯಂತಹ ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳಬೇಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುತ್ತಿವೆ, ಈ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ. ಆ ಕಾರಣಗಳಿಂದಾಗಿ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಚಂದ್ರಯ್ಯ ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್ ಶಂಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

17ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸಮನ್ವಯ ಸಮಿತಿ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಕರಪತ್ರ ಬಿಡುಗಡೆ ಮಾಡಿದರು.