ಪಾಲಕರು ಮಕ್ಕಳ ಅಕ್ಷರ ಕಲಿಕೆಗೆ ಒತ್ತು ಕೊಟ್ಟಷ್ಟು ಪಠ್ಯೇತರ ಕಲಿಕೆಗೆ ಒತ್ತು ಕೊಡಬೇಕಿದೆ. ಇಲ್ಲದೇ ಹೋದಲ್ಲಿ ಬದುಕಿಗಾಗಿ ಸಾಮಾನ್ಯ ಜ್ಞಾನ ಹೊಂದದೇ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ.
ಧಾರವಾಡ:
ಹೂವಾಗಿ ಅರಳಲು ಸರಿಯಾದ ಗಾಳಿ, ಬೆಳಕು, ನೀರು ದೊರಕಿಸಿದಾಗ ಮೊಗ್ಗು ಅರಳಿ ಹೂವಾಗಿ ಸುಗಂಧ ಎಲ್ಲೆಡೆ ಹರಡುವುದು. ಹಾಗೆಯೇ ಮಕ್ಕಳನ್ನು ಸರಿಯಾದ ವಾತಾವರಣದಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅಂದಾಗಲೇ ಮಕ್ಕಳ ನಿಜವಾದ ಪ್ರತಿಭೆ ಸಮಾಜಕ್ಕೆ ತಿಳಿಯಲಿದೆ ಎಂದು ಶಿಕ್ಷಣ ಚಿಂತಕ ಎಂ.ಎಂ. ಚಿಕ್ಕಮಠ ಹೇಳಿದರು.ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆಯು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡ ಮಕ್ಕಳ ಬಾಲ ಸಂಗೀತೋತ್ಸವ ಮತ್ತು ಬಾಲಗೌರವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಉದ್ಘಾಟಿಸಿದ ಅವರು, ಪಾಲಕರು ಮಕ್ಕಳ ಅಕ್ಷರ ಕಲಿಕೆಗೆ ಒತ್ತು ಕೊಟ್ಟಷ್ಟು ಪಠ್ಯೇತರ ಕಲಿಕೆಗೆ ಒತ್ತು ಕೊಡಬೇಕಿದೆ. ಇಲ್ಲದೇ ಹೋದಲ್ಲಿ ಬದುಕಿಗಾಗಿ ಸಾಮಾನ್ಯ ಜ್ಞಾನ ಹೊಂದದೇ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಮಾತನಾಡಿ, ಧಾರವಾಡ ಕಲಾಪೋಷಣೆಗೆ ಹೆಸರು ಮಾಡಿದೆ. ಎಳೆಯ ಮಕ್ಕಳಲ್ಲಿಯ ಪ್ರತಿಭೆ ಗುರುತಿಸಿ ಪ್ರಶಸ್ತಿ, ಬಹುಮಾನ, ಸನ್ಮಾನ ಮಾಡುತ್ತಿರುವುದು ಅಭಿನಂದನೀಯ ಎಂದರು.ಪ್ರಕಾಶ ಬಾಳಿಕಾಯಿ ಮಾತನಾಡಿದರು. ವಿದೂಷಿ ನಾಗರತ್ನ ಹಡಗಲಿ, ಕಲಾವಿದ ಡಾ. ಬಸವರಾಜ ಕಲೆಗಾರ, ಬಿಆರ್‌ಸಿ ವಿಜಯಲಕ್ಷ್ಮಿ, ಡಾ. ಎ.ಎಲ್. ದೇಸಾಯಿ ಇದ್ದರು. ಮೈಸೂರಿನ ಪಂಚಮಿ ಭೀಮಾಶಂಕರ ಬಿದನೂರ, ಅಥರ್ವ ಘಂಟೆನ್ನವರ ತಬಲಾ ಸೋಲೊ ನುಡಿಸಿದರು. ಸಾತ್ವಿಕ್ ಗುರುಬಸವ ಮಹಾಮನೆ ವಾಯಲಿನ್ ನುಡಿಸಿದರು. ಸಮೂಹ ಗೀತಗಾಯನವನ್ನು ಧಾರವಾಡದ ಸ್ವರ ಸಂವೇದಿನಿ ಸಂಗೀತ ಶಾಲೆ ವಿದ್ಯಾರ್ಥಿಗಳು, ದರ್ಬಾರ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು, ಸಾಮವೇದ ಸಂಗೀತ ವಿದ್ಯಾಲಯದ ಮಕ್ಕಳು ಹಾಗೂ ಬದಾಮಿಯ ಪುಟ್ಟರಾಜ ಸಂಗೀತ ಪಾಠಶಾಲೆಯ ಮಕ್ಕಳು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಬಾಲಗೌರವ ಪ್ರಶಸ್ತಿ ಪಡೆದವರನ್ನು ಗೌರವಿಸಲಾಯಿತು.