ಸಾರಾಂಶ
ಇದು ಕೇವಲ ಒಂದು ಗ್ರಾಮ ಪಂಚಾಯಿತಿಗೆ ಸಂಬಂಧ ಪಟ್ಟಿಲ್ಲ. ತಾಲೂಕಿನ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ತಾಲೂಕಿನ ಜನರು ಸಭೆಗೆ ಬಂದು ತಮ್ಮ ಸಮಸ್ಯೆ ತಿಳಿಸಲು ಅವಕಾಶವಿದೆ..
ಜೋಯಿಡಾ:
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬಜಾರಕುಣಂಗ ಗ್ರಾಮ ಪಂಚಾಯಿತಿಯ ಗವಳಾ ದೇವಿ ದೇವಸ್ಥಾನದಲ್ಲಿ ಡಿ. 19ರಂದು ಜನತಾ ದರ್ಶನ ಸಭೆ ನಡೆಸಲಿದ್ದಾರೆ ಎಂದು ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೊಡ ಮಾಹಿತಿ ನೀಡಿದರು.ಅವರು ಗುರುವಾರ ಜೋಯಿಡಾ ತಹಸೀಲ್ದಾರ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜೋಯಿಡಾ ತಾಲೂಕು ಅತ್ಯಂತ ವಿಸ್ತಾರವಾಗಿದ್ದು ಬಜಾರಕುಣಂಗ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರು ಬಹಳಷ್ಟು ಕಷ್ಟಪಡುತ್ತಿದ್ದಾರೆ. ಮಳೆಗಾಲ ಬಂತೆಂದರೆ ಆ ಜನರ ಪಾಡು ಯಾರಿಗೂ ಬೇಡ. ರಸ್ತೆ- ಸೇತುವೆ ಸರಿ ಇಲ್ಲ. ಹೀಗಾಗಿ ಮೂರು ತಿಂಗಳು ಓಡಾಡುವುದೇ ಕಷ್ಟ. ಅಲ್ಲಿನ ಹಲವಾರು ಸಮಸ್ಯೆಗಳಿಗೆ ಒಂದು ಪರಿಹಾರ ಸಿಗಲಿ ಎಂಬ ಉದ್ದೇಶದಿಂದ ಅಸುಳ್ಳಿ ಗ್ರಾಮದ ಗವಳಾ ದೇವಿ ದೇವಸ್ಥಾನದ ಆವರಣದಲ್ಲಿ ಸಭೆ ಕರೆಯಲಾಗಿದೆ. ಇದು ಕೇವಲ ಒಂದು ಗ್ರಾಮ ಪಂಚಾಯಿತಿಗೆ ಸಂಬಂಧ ಪಟ್ಟಿಲ್ಲ. ತಾಲೂಕಿನ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ತಾಲೂಕಿನ ಜನರು ಸಭೆಗೆ ಬಂದು ತಮ್ಮ ಸಮಸ್ಯೆ ತಿಳಿಸಲು ಅವಕಾಶವಿದೆ ಎಂದರು. ಈ ಹಿಂದೆ ಗುಂದ ಗ್ರಾಮ ಪಂಚಾಯಿತಿಯ ನಂದಿಗದ್ದೆಯಲ್ಲಿ ಅಂದು ಜಿಲ್ಲಾಧಿಕಾರಿ ಸಭೆ ನಡೆಸಿದ್ದರು. ಬರುವ ಮಂಗಳವಾರ ಜಿಲ್ಲಾಧಿಕಾರಿಗಳ ಈ ಸಭೆಗೆ ತಾಲೂಕಿನ ಜನತೆ ಆಗಮಿಸಿ ಸಹಕರಿಸಬೇಕೆಂದು ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೊಡ ಹೇಳಿದರು. ಆನಂತರ ಅಧಿಕಾರಿಗಳ ಸಭೆ ನಡೆಸಿದರು. ತಹಸೀಲ್ದಾರ್ ಮಂಜುನಾಥ ಮುನ್ನೊಳಿ, ತಾಪಂ ಇಒ ಆನಂದ ಬಡಕುಂದ್ರಿ, ಪಿಎಸ್ಐ ಮಹೇಶ ಮಾಳಿ ಇದ್ದರು.