ಸಾರಾಂಶ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಗ್ಗೆ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದ ಲತಾ ಕುಮಾರಿ, ನಂತರ ತಾವೇ ಸೈಕಲ್ ಹತ್ತಿ ನಾಗರಿಕರ ನಡುವೆ ಬೆರೆತು ಪ್ರಜಾಪ್ರಭುತ್ವದ ಮಹತ್ವ ಸಾರುವ ಅಪರೂಪದ ಕಾರ್ಯವನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಸೈಕಲ್ ಏರಿ ನಗರದ ಬೀದಿಗಳಲ್ಲಿ ಸಂಚರಿಸಿ ಜನಮನ ಸೆಳೆದು ಜಾಗೃತಿ ಮೂಡಿಸಿದರು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಗ್ಗೆ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದ ಲತಾ ಕುಮಾರಿ, ನಂತರ ತಾವೇ ಸೈಕಲ್ ಹತ್ತಿ ನಾಗರಿಕರ ನಡುವೆ ಬೆರೆತು ಪ್ರಜಾಪ್ರಭುತ್ವದ ಮಹತ್ವ ಸಾರುವ ಅಪರೂಪದ ಕಾರ್ಯವನ್ನು ನೆರವೇರಿಸಿದರು. ಡಿಸಿ ಕಚೇರಿಯಿಂದ ಹೊರಟ ಸೈಕಲ್ ಜಾಥಾ ಎನ್‌ಆರ್ ಸರ್ಕಲ್, ಹೇಮಾವತಿ ಪ್ರತಿಮೆ, ಆರ್.ಸಿ.ರೋಡ್, ಎಂಜಿ. ರೋಡ್ ಸೇರಿ ನಗರದ ಹೃದಯ ಭಾಗಗಳಲ್ಲಿ ಸಂಚರಿಸಿತು. ಮಾರ್ಗಮಧ್ಯೆ ಜಮಾಯಿಸಿದ್ದ ಜನತೆ ಜಿಲ್ಲಾಧಿಕಾರಿಯವರ ಸೈಕಲ್ ಸವಾರಿ ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.ಕೆಲವರು ಕೈಬೀಸಿ ಹರ್ಷ ವ್ಯಕ್ತಪಡಿಸಿದರೆ, ಹಲವರು ತಮ್ಮ ಮೊಬೈಲ್‌ನಲ್ಲಿ ಈ ಕ್ಷಣವನ್ನು ಸೆರೆ ಹಿಡಿದುಕೊಂಡರು. ಪ್ರಜಾಪ್ರಭುತ್ವವು ಕೇವಲ ಒಂದು ವ್ಯವಸ್ಥೆ ಮಾತ್ರವಲ್ಲ. ಅದು ಜನರ ಹಕ್ಕು ಮತ್ತು ಜವಾಬ್ದಾರಿ. ಪ್ರತಿಯೊಬ್ಬರೂ ಜಾಗೃತಿಯಿಂದ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಶಕ್ತಿಶಾಲಿಯಾಗುತ್ತದೆ ಎಂಬ ಸಂದೇಶವನ್ನು ಈ ಸೈಕಲ್ ಜಾಥಾ ಸಾರಿತು.ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದೂದ್ ಪೀರ್ ಸೇರಿದಂತೆ ಹಲವು ಅಧಿಕಾರಿಗಳು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಡಿಸಿಯವರ ಸೈಕಲ್ ಹಿಂದೆ ಸವಾರಿಯಾಗಿ ಜಾಗೃತಿ ಮೂಡಿಸಿದರು. ನಾಗರಿಕರಲ್ಲಿ ಹಬ್ಬದ ವಾತಾವರಣ ಮೂಡಿಸುವಂತಿತ್ತು.
ಕಳೆದ ಒಂದು ದಿನಗಳ ಹಿಂದೆ ಬೈಕ್ ಸವಾರಿ ಮಾಡಿ ಸುದ್ದಿಯಾಗಿದ್ದ ಲತಾ ಕುಮಾರಿ, ಇದೀಗ ಸೈಕಲ್ ಏರಿ ನಗರದಲ್ಲಿ ಸಂಚರಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆಡಳಿತಾಧಿಕಾರಿ ಎಂದರೆ ಕೇವಲ ಕಚೇರಿಯೊಳಗೆ ಕುಳಿತುಕೊಳ್ಳುವವರು ಅಲ್ಲ ಜನರ ನಡುವೆ ಬೆರೆತು, ನೇರವಾಗಿ ಸಂಪರ್ಕ ಸಾಧಿಸುವವರು ಎಂಬ ಸಂದೇಶವನ್ನು ಅವರು ತಮ್ಮ ಸರಳ ನಡೆ-ನುಡಿಗಳ ಮೂಲಕ ತೋರಿಸಿದ್ದಾರೆ.ನಗರದಲ್ಲಿ ಟ್ರಾಫಿಕ್ ಪೊಲೀಸರು, ಸ್ವಯಂಸೇವಕರು ಸೈಕಲ್ ಜಾಥಾಕ್ಕ ಸಾಥ್ ನೀಡಿದರು. ಹಾದಿ ಪಕ್ಕದ ಅಂಗಡಿಕಾರರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಈ ಅಪರೂಪದ ಸನ್ನಿವೇಶವನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಡಿಸಿ ಮ್ಯಾಡಂ ನಮ್ಮ ಜೊತೆ ಸೈಕಲ್‌ನಲ್ಲಿ ಸಂಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹಲವರು ಪ್ರತಿಕ್ರಿಯಿಸಿದರು. ಸಾಮಾನ್ಯವಾಗಿ ಆಚರಣೆಗಳು ಕೇವಲ ಸಭಾಂಗಣದೊಳಗೆ ಸೀಮಿತವಾಗುವ ಕಾಲದಲ್ಲಿ, ಜಿಲ್ಲಾಧಿಕಾರಿ ಸ್ವತಃ ಸೈಕಲ್ ಏರಿ ರಸ್ತೆ ಮೇಲೆ ಇಳಿಯುವ ಮೂಲಕ ಪ್ರಜಾಪ್ರಭುತ್ವವು ಜನರ ನಡುವೆ ಜೀವಂತವಾಗಿರಬೇಕು ಎಂಬ ಬಲವಾದ ಸಂದೇಶ ನೀಡಿದ್ದಾರೆ.ಇದೆ ವೇಳೆ ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಸಮಾಜ ಸೇವಕ ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.