ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ರಾತ್ರಿಯ ವೇಳೆ ಮನೆ ಮೇಲೆ ಕಲ್ಲು ಬೀಳುತ್ತವೆ, ಏಕಾಏಕಿ ರಸ್ತೆಗೆ ಅಡ್ಡಲಾಗಿ ಕಾಂಪೌಡ್ ನಿರ್ಮಿಸಲಾಗುತ್ತದೆ. ಹೊಸದಾಗಿ ಮನೆ ಕಟ್ಟಲು ಅಡ್ಡಿಪಡಿಸಲಾಗುತ್ತಿದೆ. ಒಟ್ಟಾರೆ ನೆಮ್ಮದಿಯೇ ಇಲ್ಲವಾಗಿದೆ. ಇದು ತಾಲೂಕಿನ ಹಾಡ್ಲಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಅಲವತ್ತುಕೊಂಡ ಪರಿ.ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಹಾಡ್ಲಹಳ್ಳಿ ಗ್ರಾಮಸ್ಥರು ಕೆಲವು ಕುಟುಂಬಗಳಿಂದ ಅನುಭವಿಸುತ್ತಿರುವ ದೂರುಗಳ ಬಗ್ಗೆ ವಿವರಿಸಿದ್ದರು. ಈ ವೇಳೆ ಗ್ರಾಮಸ್ಥರಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದರು. ಇದರಂತೆ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳ ಎದುರು ಇಡಿ ಗ್ರಾಮಸ್ಥರೆ ಜಮಾಯಿಸಿ ದೂರುಗಳ ಸುರಿಮಳೆಯನ್ನೆ ಸುರಿಸಿದರು. ಗ್ರಾಮದ ಸುಮಾರು ೨೫ ಎಕರೆ ಪ್ರದೇಶದಲ್ಲಿ ಅನಾದಿ ಕಾಲದಿಂದ ಸುಮಾರು ೧೬೦ ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ದೇವಸ್ಥಾನ, ಸ್ಮಶಾನ, ಮಕ್ಕಳ ಸ್ಮಶಾನ ಸಹ ಇಲ್ಲಿದೆ. ಆದರೆ, ಕಾಲಕ್ರಮೇಣ ಗ್ರಾಮಸ್ಥರ ಗಮನಕ್ಕೆ ಬಾರದಂತೆ ವ್ಯಕ್ತಿಯೊಬ್ಬರಿಗೆ ವಾಸ ಪ್ರದೇಶವೇ ಮಂಜೂರಾಗಿದೆ. ಆದರೂ ಮಂಜೂರಾದ ವ್ಯಕ್ತಿ ಇದುವರೆಗೆ ಗ್ರಾಮಸ್ಥರಿಗೆ ಯಾವುದೇ ತೊಂದರೆ ನೀಡದ ಕಾರಣ ಸಮಸ್ಯೆ ಉದ್ಭವಿಸಿರಲಿಲ್ಲ. ಆದರೆ ಇತ್ತೀಚೆಗೆ ಗ್ರಾಮದೇವರಿಗೆ ಹೊಸದಾಗಿ ಗುಡಿ ನಿರ್ಮಿಸಲು ಮುಂದಾದ ವೇಳೆ ಸಮಸ್ಯೆ ಬಿಗಡಾಯಿಸಿದ್ದು ಗುಡಿ ನಿರ್ಮಾಣಕ್ಕೆ ಅವಕಾಶ ನೀಡಿದ ಕುಟುಂಬ, ಇಡಿ ಗ್ರಾಮ ನಮಗೆ ಸೇರುತ್ತಿದೆ ಎಂದು ಗ್ರಾಮದ ಕೆಲವು ಕುಟುಂಬಗಳ ಸದಸ್ಯರು ತೊಂದರೆ ನೀಡುತ್ತಿದ್ದಾರೆ. ಹೊಸದಾಗಿ ಯಾವುದೇ ನಿರ್ಮಾಣ ಕಾರ್ಯಕ್ಕೂ ಅವಕಾಶ ನೀಡುತ್ತಿಲ್ಲ. ಸಂಚರಿಸುವ ರಸ್ತೆಗೆ ಅಡ್ಡಿಪಡಿಸಲಾಗುತ್ತಿದೆ. ರಾತ್ರಿ ವೇಳೆ ಹೆಂಚುಗಳ ಮೇಲೆ ಕಲ್ಲು ಬೀಳುತ್ತಿವೆ. ಒಟ್ಟಿನಲ್ಲಿ ನೆಮ್ಮದಿಯ ಜೀವನ ಇಲ್ಲದಾಗಿದೆ. ದಯವಿಟ್ಟು ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಧಿಕಾರಿಗಳ ಬಳಿ ಅವಲತ್ತುಕೊಂಡರು.
ಈ ವೇಳೆ ದಾಖಲೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಎರಡು ಕಕ್ಷಿದಾರರ ದಾಖಲೆ ಪರಿಶೀಲಿಸಿ ತಮಗೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ರಾಜೇಶ್ ಅವರಿಗೆ ಸೂಚಿಸಿದರು.ಈ ವೇಳೆ ತಹಸೀಲ್ದಾರ್ ಸುಪ್ರೀತಾ, ಗ್ರಾಮದ ಮುಖಂಡರಾದ ರತನ್, ರಾಮಚಂದ್ರೆಗೌಡ, ರಮೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.