ಇದನ್ನೇ ಬಂಡವಾಳ ಮಾಡಿಕೊಂಡ ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರ, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಅಥವಾ ಆದೇಶ ಪಡೆಯದೆ ಏಕಾಏಕಿ ಭಕ್ತರಿಂದ 500 ರು. ಪಡೆದು ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಪುಟ್ಟ ಪ್ರವೇಶ ದ್ವಾರದ ಮೂಲಕ ಭಕ್ತರನ್ನು ಕಳುಹಿಸಿಕೊಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಭಕ್ತರಿಂದ ಕಳೆದ ಒಂದು ವಾರದಿಂದ ತೆಗೆದುಕೊಳ್ಳುತ್ತಿದ್ದ 500 ರು. ಹಣವನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಿಲ್ಲಿಸಿರುವುದಾಗಿ ದೇವಾಲಯದ ಇಒ ಎಂ.ಉಮಾ ತಿಳಿಸಿದ್ದಾರೆ.ಸೇವಾ ಕಾಣಿಕೆ ಹೆಸರಿನಲ್ಲಿ ಭಕ್ತರ ಸುಲಿಗೆ...! ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಪತ್ರಿಕೆ ವಿಶೇಷ ವರದಿ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಎಚ್ಚೆತ್ತ ಅಧಿಕಾರಿಗಳು ಸೇವಾ ಕಾಣಿಕೆ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದ ಹಣವನ್ನು ನಿಲ್ಲಿಸಿ ಎಂದಿನಂತೆ ಇದ್ದ 50 ರು. ಹಣವನ್ನು ಭಕ್ತರಿಂದ ಪಡೆದು ದೇವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಧನುರ್ಮಾಸದಲ್ಲಿ ಒಂದೇ ದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಒಳಗಾಗಿ ಆದಿ, ಮಧ್ಯ ಹಾಗೂ ಅಂತ್ಯ ರಂಗನ ದರ್ಶನ ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ಹಿನ್ನೆಲೆಯಲ್ಲಿ ನಿತ್ಯ ಬೆಳಗ್ಗಿನ ಜಾವ 2 ರಿಂದ 3 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಮುಂದೆ ಜಮಾವಣೆಗೊಂಡು ಮೊದಲು 4 ಗಂಟೆಗೆ ಆದಿರಂಗನ ದರ್ಶನ ಪಡೆದು, ನಂತರ ಮಧ್ಯ ಹಾಗೂ ಅಂತ್ಯ ರಂಗನ ದರ್ಶನಕ್ಕೆ ತೆರಳಲು ಮುಂದಾಗುತ್ತಾರೆ.ಇದನ್ನೇ ಬಂಡವಾಳ ಮಾಡಿಕೊಂಡ ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರ, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಅಥವಾ ಆದೇಶ ಪಡೆಯದೆ ಏಕಾಏಕಿ ಭಕ್ತರಿಂದ 500 ರು. ಪಡೆದು ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಪುಟ್ಟ ಪ್ರವೇಶ ದ್ವಾರದ ಮೂಲಕ ಭಕ್ತರನ್ನು ಕಳುಹಿಸಿಕೊಡುತ್ತಿದ್ದರು.
ಭಕ್ತರು ಸಹ ಕೇವಲ 5 ರಿಂದ 10 ನಿಮಿಷದಲ್ಲೇ ಶ್ರೀ ರಂಗನಾಥನ ದರ್ಶನ ಪಡೆಯಬಹುದು ಎಂಬ ಉದ್ದೇಶದಿಂದ ಮುಗಿಬಿದ್ದು 500 ರು. ಕೊಟ್ಟ ತೆರಳುತ್ತಿದ್ದರು. ಆದರೆ, ಭಕ್ತರಿಂದ ನಿಯಮ ಮೀರಿ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತಿದ್ದರೂ ಅವರಿಗೆ ಕೇವಲ ಲಾಡು, ಕುಂಕುಮ ಪ್ರಸಾದ ನೀಡುತ್ತಿಲ್ಲ ಎಂದು ಭಕ್ತರು ಹಾಗೂ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಈ ಬಗ್ಗೆ ಕನ್ನಡಪ್ರಭ ಪತ್ರಿಕೆ ವಿಶೇಷ ವರದಿ ಮಾಡಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಭಕ್ತರಿಂದ ಸಂಗ್ರಹಿಸುತ್ತಿರುವ ಹಣವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.