ವ್ಹಿಪ್‌ ಉಲ್ಲಂಘಿಸಿದ ಜೆಡಿಎಸ್‌ ಸದಸ್ಯರಿಗೆ ಡೀಸಿ ನೋಟಿಸ್

| Published : Sep 17 2024, 12:48 AM IST

ವ್ಹಿಪ್‌ ಉಲ್ಲಂಘಿಸಿದ ಜೆಡಿಎಸ್‌ ಸದಸ್ಯರಿಗೆ ಡೀಸಿ ನೋಟಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದ ಎಲ್ಲರೂ ಒಮ್ಮತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಭ್ಯರ್ಥಿಗೆ ಮತ ಹಾಕುವಂತೆ ಸಭೆ ನಡೆಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ವಿಪ್ ಕೂಡಾ ಜಾರಿಗೊಳಿಸಿದ್ದರು. ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರೊಂದಿಗೆ ಗುರುತಿಸಿಕೊಂಡಿರುವ ಸಮೀವುಲ್ಲಾ ಹಾಗೂ ಮನೋಹರ್ ಇದ್ಯಾವುದಕ್ಕೂ ಸೊಪ್ಪು ಹಾಕಿಲ್ಲ. ಇದಲ್ಲದೇ ಜೆಡಿಎಸ್‌ನಿಂದ ಉಚ್ಚಾಟಿತರಾಗಿರುವ ಸಿ.ಎಂ.ಇಬ್ರಾಹಿಂ ಬಣದ ಹೆಸರಿನಲ್ಲಿ ಉಭಯ ಸ್ಥಾನಗಳಿಗೆ ಉಮೇದುವರಿಕೆ ಸಲ್ಲಿಸಿ ಸುಜಾತಾ ರಮೇಶ್ ಸೋಲಿಗೆ ಕಾರಣರಾಗಿದ್ದರು.ಹೀಗಾಗಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಸುಜಾತ ರಮೇಶ್ ವಿರುದ್ಧ ಮತ ಚಲಾಯಿಸಿದ ಹದಿಮೂರು ಮಂದಿ ಹಾಗೂ ಒಬ್ಬ ಸದಸ್ಯ ಸೇರಿದಂತೆ ಹದಿನಾಲ್ಕು ಮಂದಿಗೆ ಸೆ.೨೦ರ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇತ್ತೀಚೆಗೆ ಮುಕ್ತಾಯಗೊಂಡ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಸುಜಾತ ರಮೇಶ್ ವಿರುದ್ಧ ಮತ ಚಲಾಯಿಸಿದ ಹದಿಮೂರು ಮಂದಿ ಹಾಗೂ ಒಬ್ಬ ಸದಸ್ಯ ಸೇರಿದಂತೆ ಹದಿನಾಲ್ಕು ಮಂದಿಗೆ ಸೆ.೨೦ರ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿಯಾಗಿದ್ದು ಸದಸ್ಯರಲ್ಲಿ ಡವಡವ ಶುರುವಾಗಿದೆ. ಜೆಡಿಎಸ್ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದ ಎಲ್ಲರೂ ಒಮ್ಮತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಭ್ಯರ್ಥಿಗೆ ಮತ ಹಾಕುವಂತೆ ಸಭೆ ನಡೆಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ವಿಪ್ ಕೂಡಾ ಜಾರಿಗೊಳಿಸಿದ್ದರು. ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರೊಂದಿಗೆ ಗುರುತಿಸಿಕೊಂಡಿರುವ ಸಮೀವುಲ್ಲಾ ಹಾಗೂ ಮನೋಹರ್ ಇದ್ಯಾವುದಕ್ಕೂ ಸೊಪ್ಪು ಹಾಕಿಲ್ಲ. ಇದಲ್ಲದೇ ಜೆಡಿಎಸ್‌ನಿಂದ ಉಚ್ಚಾಟಿತರಾಗಿರುವ ಸಿ.ಎಂ.ಇಬ್ರಾಹಿಂ ಬಣದ ಹೆಸರಿನಲ್ಲಿ ಉಭಯ ಸ್ಥಾನಗಳಿಗೆ ಉಮೇದುವರಿಕೆ ಸಲ್ಲಿಸಿ ಸುಜಾತಾ ರಮೇಶ್ ಸೋಲಿಗೆ ಕಾರಣರಾಗಿದ್ದರು.

ಎಲ್ಲರ ಪಕ್ಷ ವಿರೋಧಿ ನಡೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೆ.ಎಸ್.ಲಿಂಗೇಶ್ ಹಾಗೂ ಪರಾಜಿತ ಅಭ್ಯರ್ಥಿ ಸುಜಾತಾ ರಮೇಶ್ ವಕೀಲರೊಂದಿಗೆ ಆಗಮಿಸಿ ಆ.೩೦ರಂದು ಪೌರಾಯುಕ್ತ ಕೃಷ್ಣಮೂರ್ತಿ ಅವರ ಮೂಲಕ ಸದಸ್ಯ ಸ್ಥಾನ ಅನರ್ಹಗೊಳಿಸುವಂತೆ ಕೋರಿ ದೂರು ನೀಡಿದ್ದರು. ಇದನ್ನು ಪರಿಗಣಿಸಿರುವ ಡಿಸಿ, ಹಾಲಿ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಸದಸ್ಯರಾದ ಅನ್ನಪೂರ್ಣ, ಪ್ರೇಮಾ, ಜಿ.ಟಿ.ಗಣೇಶ್, ಜಾಕೀರ್ ಹುಸೇನ್, ದಯಾನಂದ, ಕಲೈಅರಸಿ, ಆರ್.ಕಾಂತೇಶ್, ಇ.ಎಂ.ರಾಜಶೇಖರ್,ಶಮಾಭಾನು, ರೇಷ್ಮಾ,ಈಶ್ವರಪ್ಪ ಹಾಗೂ ಫಜ್ಲೂನಾ ಜಮೀಲ್‌ಗೆ ನೊಟೀಸ್ ಜಾರಿ ಮಾಡಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ದಿನವೇ ಈಶ್ವರಪ್ಪ ರಾಜೀನಾಮೆ ನೀಡಿದ್ದು, ವಾಪಸ್ ಪಡೆಯದ ಹಿನ್ನೆಲೆಯಲ್ಲಿ ರಾಜಿನಾಮೆ ಅಂಗೀಕರಿಸಿರುವುದಾಗಿ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಸದಸ್ಯತ್ವ ಕೈತಪ್ಪಿದ ಬಳಿಕವೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದು ಮಹ್ವದ ಬೆಳವಣಿಗೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಎಂ.ಇಬ್ರಾಹಿಂ ಭೇಟಿ ಮಾಡಿ ಶಾಲು, ಮೈಸೂರು ಪೇಟ ಹಾಕಿರುವ ಫೋಟೋ ವೈರಲ್ ಆಗಿದ್ದು ಪರ, ವಿರೋಧಿಗಳ ಹೇಳಿಕೆ ಹಾಗೂ ಪ್ರತಿಹೇಳಿಕೆಗೆ ವೇದಿಕೆ ಒದಗಿಸಿದೆ. ಎಲ್ಲರ ಚಿತ್ತ ಡಿಸಿ ಕಚೇರಿಯತ್ತ ನೆಟ್ಟಿದ್ದು ಸದಸ್ಯತ್ವ ವಜಾಗೊಳ್ಳುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.

ಹಗ್ಗಕೊಟ್ಟು ಕೈಕಟ್ಟಿಸಿಕೊಂಡರು ಎನ್ನುವಂತೆ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಎಂ.ಇಬ್ರಾಹಿಂ ಭೇಟಿ ಮಾಡಿ ಶಾಲು, ಮೈಸೂರು ಪೇಟ ಹಾಕಿರುವುದು ಸುಜಾತಾ ರಮೇಶ್ ಅವರಿಗೆ ಮತ್ತೊಂದು ಅಸ್ತ್ರ ನೀಡಿದಂತಾಗಿದೆ.

ರಾಜಕೀಯ ಮಾಡಲು ಕಾಂಗ್ರೆಸ್ ಬೇಕು ಅದರೆ ಅಧಿಕಾರ ಅನುಭವಿಸಲು ಜೆಡಿಎಸ್‌ನಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವಿರಲಿ ಹವಣಿಸಿರುವವರು ಕಳೆದ ವಿಧಾನಸಭೆ, ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡಿದ್ದಾರೆ. ಸ್ವಾಭಿಮಾನ,ರಾಜಕೀಯ ನೈತಿಕತೆ, ಮಾನ, ಮರ್ಯಾದೆಯಿದ್ದರೆ ಕೂಡಲೇ ಜೆಡಿಎಸ್‌ಗೆ ರಾಜೀನಾಮೆ ನೀಡಲಿ. ನಂತರ ಕಾಂಗ್ರೆಸ್ ಸೇರಿ ಚುನಾವಣೆ ಎದುರಿಸಿ ಗೆದ್ದು ಬಂದು ಅಧಿಕಾರ ಹಿಡಿಯಲಿ ನೋಡೋಣ. ಇದೀಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ತಕ್ಕ ಪಾಠ ಕಲಿಸಲಿದ್ದು ಅಂತಿಮ ಗೆಲುವು ನಮ್ಮದಾಗಲಿದೆ. ಸತ್ಯಕ್ಕೆ ಜಯ ದೊರೆಯಲಿದೆ ಎಂದು ೩೧ನೇ ವಾರ್ಡ್ ಜೆಡಿಎಸ್ ಸದಸ್ಯೆ ಸುಜಾತಾ ರಮೇಶ್ ಹೇಳಿದ್ದಾರೆ.