ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಎಪಿಎಂಸಿ ಆವರಣದಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಹೆಚ್ಚಿನ ನೋಂದಾವಣೆಯಾಗಿದ್ದು ಕೂಡಲೇ ಹೆಚ್ಚುವರಿಯಾಗಿ ಎರಡು ರಾಗಿ ಖರೀದಿ ಘಟಕವನ್ನು ಪ್ರಾರಂಭಿಸಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ಕೆ ಎಫ್ ಸಿ ಎಸ್ ಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಲೂಕಿನ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಶುಭ ಕಲ್ಯಾಣ್ ರೈತರ ದೂರುಗಳನ್ನು ಆಲಿಸಿದರು. ರಾಗಿ ಖರೀದಿ ವೇಳೆ ರೈತರಿಂದ 50 ಕೆಜಿ 600 ಗ್ರಾಂ ರಾಗಿ ಖರೀದಿಸಬೇಕೆಂದು ನಿಯಮವಿದೆ. ಆದರೆ ಇಲ್ಲಿಯ ಅಧಿಕಾರಿಗಳು ಸರಿ ಸುಮಾರು 52 ಕೆಜಿಯಷ್ಟು ರಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಅಲ್ಲದೇ ರೈತರಿಂದ ಪ್ರತಿ ಕ್ವಿಂಟಾಲ್ ರಾಗಿಗೆ 100ರು ಹಮಾಲಿ ಹಣ ಎಂದು ಪಡೆದುಕೊಳ್ಳುತ್ತಿದ್ದಾರೆ.ಇದರಿಂದ ರೈತಾಪಿಗಳಿಗೆ ನಷ್ಠ ಉಂಟಾಗುತ್ತಿದೆ ಎಂದು ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜು ಮತ್ತು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಜಿಲ್ಲಾಧಿಕಾರಿಗಳಿಗೆ ದೂರಿದರು. ರೈತರಿಗೆ ಮೂಲಭೂತ ಅಗತ್ಯಗಳನ್ನು ಕಲ್ಪಿಸಬೇಕು. ಸೂಕ್ತ ರಕ್ಷಣೆ ನೀಡಬೇಕು. ಸಕಾಲದಲ್ಲಿ ಹಣ ಬಿಡುಗಡೆಗೊಳಿಸಬೇಕೆಂದು ಈರ್ವರೂ ಆಗ್ರಹಿಸಿದರು. ರೈತರು ತೂಕದಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ದೂರಿದ ಮೇರೆಗೆ ದಾಸ್ತಾನು ಕೊಠಡಿಗೆ ತೆರಳಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ದಾಸ್ತಾನಿನ ಮಧ್ಯದಲ್ಲಿದ್ದ ಎರಡು ಚೀಲಗಳನ್ನು ತೂಕ ಮಾಡುವಂತೆ ಸೂಚಿಸಿದರು. ಆವೇಳೆ ಒಂದು 51.600 ಕೆಜಿ ಬಂದರೆ ಮತ್ತೊಂದು 49 ಕೆಜಿ ಮಾತ್ರ ಬಂದಿತು. ರಾಗಿ ಖರೀದಿ ವೇಳೆ ರೈತರೇ ತೂಕ ಮಾಡಲು ರಾಗಿಯನ್ನು ಸುರಿದರೆ ಯಾವುದೇ ಹಣ ನೀಡುವಂತಿಲ್ಲ. ಆದರೆ ರಾಗಿ ತೂಕ ಮಾಡಲು ಹಮಾಲಿಗಳಿಂದ ರಾಗಿ ತೂಕ ಹಾಕಿಸಿದಲ್ಲಿ ಅವರ ಕೂಲಿ ಕೊಡಬೇಕಾಗುವುದು ಅನಿವಾರ್ಯ. ಆದರೂ ಸಹ 100 ರುತೆಗೆದುಕೊಳ್ಳುವ ಬದಲಾಗಿ ಒಂದಿಷ್ಟು ಕಡಿಮೆ ಹಣ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರಿಗೆ ರೋಗಿಗಳಿಂದ ಸಮಸ್ಯೆಯ ಸುರಿಮಳೆ ಆಯಿತು. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಬಡವರಾಗಿರುವ ನಾವು ಹೆರಿಗೆ ಮಾಡಿಸಲು ಖಾಸಗಿ ಆಸ್ಪತ್ರೆಗೆ ಹೋಗಬೇಕಿದೆ. ಸಾವಿರಾರು ರು. ಖರ್ಚು ಮಾಡುವ ಶಕ್ತಿ ತಮಗಿಲ್ಲ. ಹಲವಾರು ಔಷಧಗಳನ್ನು ಬೇರೆಡೆ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುತ್ತಾರೆ ಎಂದು ದೂರಿದರು. ಆಸ್ಪತ್ರೆಗೆ ಸೂಕ್ತ ಸಿಬ್ಬಂದಿ ಮತ್ತು ವೈದ್ಯರ ಕೊರತೆ ಇದೆ ಎಂದು ತಾಲೂಕು ಆಡಳಿತಾಧಿಕಾರಿ ಡಾ.ರಂಗನಾಥ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮೀಕಾಂತ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ತಾಲೂಕಿನ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೂ ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಶುಚಿತ್ವದ ಕೊರತೆ ಇದೆ ಎಂದು ಅಸಮಾಧಾನ ಹೊರಹಾಕಿದರು. ಈ ವೇಳೆ ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕುಂ ಇ ಅಹಮದ್, ಇಒ ಅನಂತರಾಜು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಆಹಾರ ನಿರೀಕ್ಷರಾದ ಕೃಷ್ಣೇಗೌಡ, ಹರೀಶ್, ಬಿಇಓ ಸೋಮಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.