ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಸಭೆ ನಡೆಸಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಭೂ ಸ್ವಾಧೀನದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ, ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಭೂಸ್ವಾಧೀನ ಅಡ್ಡಿಯಾದರೆ ಕೂಡಲೆ ಇತ್ಯರ್ಥಪಡಿಸುವಂತೆ ಉಪವಿಭಾಗಾಧಿಕಾರಿ ಮಹೇಶ ಜೆ. ಅವರಿಗೆ ಸೂಚಿಸಿದರು.

ಈ ಸಂದರ್ಭ ಮಾತನಾಡಿದ ಐಆರ್‌ಬಿ ಅಧಿಕಾರಿಗಳು, ಕೊಟೇಶ್ವರ ಕ್ರಾಸ್‌ ಬಳಿ ಪೌರಕಾರ್ಮಿಕ ಕಾಲನಿಯವರು ಪರಿಹಾರ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಜಾಗ ಬಿಟ್ಟುಕೊಟ್ಟಿಲ್ಲ. ಇದರಿಂದಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಾಗ ಖುಲ್ಲಾ ಪಡಿಸಿ ನೀಡುವಂತೆ ನಗರಸಭೆ ಪೌರಾಯುಕ್ತ ಬಾಬಾ ಸಾಹೇಬ ಮಾನೆಗೆ ಸೂಚಿಸಿದರು. ರಸ್ತೆ ಕಾಮಗಾರಿಯ ಪ್ರಗತಿ ಹಾಗೂ ನೀರು ಹರಿಯುವ ಚರಂಡಿಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಹೆದ್ದಾರಿಯಲ್ಲಿ ನಿಂತ ನೀರು ಯಾವ ನದಿ ಸೇರಲಿದೆ ಎಂದು ಪ್ರಶ್ನಿಸಿದರು. ರಸ್ತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸಂಚಾರಕ್ಕೆ ಅಡಚಣೆಯಾಗದಂತೆ, ಅಪಘಾತಗಳು ಸಂಭವಿಸದಂತೆ ಅಲ್ಲಲ್ಲಿ ಸೂಚನಾ ಫಲಕವನ್ನು ಅಳವಡಿಸಿ ಸಂಚಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು. ಐ.ಆರ್.ಬಿಯಿಂದ ಹೆದ್ದಾರಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದೆ. ಅದರೆ ಅದರ ಹೊರ ಹರಿವಿನ ಬಗ್ಗೆ ಎಲ್ಲೂ ನಗರಸಭೆ ಮಾಹಿತಿ ಇಲ್ಲ. ಪಟ್ಟಣದ ಸಂಶುದ್ದೀನ್‌ ವೃತ್ತದ ಬಳಿಯಿಂದ ಬಂದರ ರಸ್ತೆ ತನಕ ಬೃಹತ್‌ ಆಕಾರದ ಚರಂಡಿ ನಿರ್ಮಿಸಿ ಡಾರಂಟಾ ಮೂಲಕ ಶರಾಬಿ ನದಿಗೆ ನೀರು ಹರಿದು ಹೋಗುವಂತೆ ಮಾಡಲು ಅವಕಾಶ ಇದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಈ ಬಗ್ಗೆ ನಗರಸಭೆಯಿಂದ ನೀಲನಕ್ಷೆ ರೂಪಿಸುವಂತೆ ಸೂಚಿಸಿದರು.


ಅಪರ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲಾ, ಭಟ್ಕಳ ಉಪವಿಭಾಗಾಧಿಕಾರಿ ಜೆ. ಮಹೇಶ, ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಭಟ್ಕಳ ಡಿವೈಎಸ್ಪಿ ಬಿ. ಗಿರೀಶ, ಹೆದ್ದಾರಿ ಯೋಜನಾಧಿಕಾರಿ ಶ್ರೀನಿವಾಸ, ಐಆರ್‌ಬಿ ಎಂಜಿನಿಯರ್‌ ಸುದೇಶ, ಪುರಸಭೆ ಎಂಜಿನಿಯರ್‌ ಅರವಿಂದ್‌, ವೆಂಕಟೇಶ ನಾವುಡ ಇತರರು ಉಪಸ್ಥಿತರಿದ್ದರು.