ಡಬಲ್‌ ಟ್ಯಾಕ್ಸ್ ವಸೂಲಿ ನಿಲ್ಲಿಸಲು ಡಿಸಿ ಖಡಕ್ ಆದೇಶ

| Published : Jul 16 2024, 12:33 AM IST

ಸಾರಾಂಶ

ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ನೇತೃತ್ವದಲ್ಲಿ ಡಿಸಿ ಬಳಿ ಸೋಮವಾರ ತೆರಳಿದ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯರ ನಿಯೋಗದಿಂದಾಗಿ ಪಟ್ಟಣದ ಜನತೆ ಡಬಲ್ ಟ್ಯಾಕ್ಸ್‌ನಿಂದ ಮುಕ್ತಿ ಹೊಂದುವಂತಾಗಿದೆ.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ನೇತೃತ್ವದಲ್ಲಿ ಡಿಸಿ ಬಳಿ ಸೋಮವಾರ ತೆರಳಿದ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯರ ನಿಯೋಗದಿಂದಾಗಿ ಪಟ್ಟಣದ ಜನತೆ ಡಬಲ್ ಟ್ಯಾಕ್ಸ್‌ನಿಂದ ಮುಕ್ತಿ ಹೊಂದುವಂತಾಗಿದೆ.

ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಮತ್ತು ಪುರಸಭೆ ಸದಸ್ಯರು ಡಬಲ್‌ ಟ್ಯಾಕ್ಸ್ ಕಟ್ಟಿಸಿಕೊಳ್ಳುವಂತೆ ಸರಕಾರ ನೀಡಿರುವ ಆದೇಶ ಕೊಡಿ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರನ್ನು ಕೇಳಿದಾಗ, ಜಿಲ್ಲಾಧಿಕಾರಿ ಪುರಸಭೆ ಅಧಿಕಾರಿಗಳಿಗೆ ಇಂದಿನಿಂದಲೇ ಡಬಲ್‌ ಟ್ಯಾಕ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಖಡಕ್ ಸೂಚನೆ ನೀಡಿದರು. ಇನ್ನು ಮುಂದೆ ಪಟ್ಟಣದ ಜನತೆ ತಮ್ಮ ನಿವೇಶನಗಳಿಗೆ ಡಬಲ್ ಟ್ಯಾಕ್ಸ್ ಕಟ್ಟುವುದಕ್ಕೆ ಬ್ರೇಕ್ ಬಿದ್ದಿದೆ.

ಕಳೆದ ೩ ತಿಂಗಳಿಂದಲೂ ಪುರಸಭೆಯಲ್ಲಿ ಡಬಲ್ ಟ್ಯಾಕ್ಸ್ ವಸೂಲಿ ಕುರಿತಂತೆ ಪುರಸಭೆ ಸದಸ್ಯರು ಪುರಸಭೆ ಕಚೇರಿ ಎದುರು ಧರಣಿ ನಡೆಸಿದ್ದರು. ಇದೀಗ ಅಂತಿಮವಾಗಿ ಕೆಎಂಎಫ್ ಅಧ್ಯಕ್ಷರ ನೇತೃತ್ವದ ನಿಯೋಗದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ತಕ್ಷಣದಿಂದಲೇ ಡಬಲ್ ಟ್ಯಾಕ್ಸ್ ಕೈಬಿಡುವಂತೆ ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಕಂದಾಯ ಅಧಿಕಾರಿ ಮಾರೆಣ್ಣಗೆ ಸೂಚಿಸಿದರು. ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಫಾರಂ ನಂ.೩ ನೀಡುವುದು ಬೇಡ ಎಂದು ಆದೇಶಿಸಿದರು.

ಈ ಕುರಿತು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಮಾತನಾಡಿ, ಸಾರ್ವಜನಿಕರಿಗೆ ಹೊರೆಯಾಗುತ್ತಿರುವ ಡಬಲ್ ಟ್ಯಾಕ್ಸ್ ವಸೂಲಿಯನ್ನು ಪುರಸಭೆಯವರು ಕೈಬಿಡಬೇಕು. ರಾಜ್ಯದ ಬೇರೆ ಯಾವುದೇ ಪುರಸಭೆಯಲ್ಲಿ ಇಲ್ಲದಷ್ಟು ಟ್ಯಾಕ್ಸ್ ವಸೂಲಿ ಮಾಡುವ ಮೂಲಕ ಪುರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ತೆರೆಗೆ ಹೊರೆ ಮಾಡಿದ್ದಾರೆ. ಜೊತೆಗೆ ಅಧಿಕೃತ ಆಸ್ತಿಪಾಸ್ತಿಗಳಿಗೂ ಅನಧಿಕೃತವೆಂದು ದಾಖಲೆ ನೀಡುತ್ತಿರುವ ಪುರಸಭೆ ಅಧಿಕಾರಿಗಳು ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂದರು.

ಪುರಸಭೆ ಸದಸ್ಯರಾದ ಎಂ. ಮರಿರಾಮಣ್ಣ, ಪವಾಡಿ ಹನುಮಂತಪ್ಪ, ಅಜೀಜುಲ್ಲಾ, ಮಾಜಿ ಸದಸ್ಯರಾದ ಅಲ್ಲಾಭಕ್ಷಿ, ಡಿಶ್ ಮಂಜುನಾಥ, ಗ್ರಾಪಂ ಮಾಜಿ ಅಧ್ಯಕ್ಷ ಜಿ. ಹನುಮಂತಪ್ಪ, ಸೊನ್ನದ ಗುರುಬಸವರಾಜ, ಪ್ರಭಾಕರ, ಉಮಾಪತಿ, ಬಾಳಪ್ಪ ಇತರರಿದ್ದರು.