ನರಸಿಂಹರಾಜಪುರತಾಲೂಕು ಕಚೇರಿ ಮುಂಭಾಗದಲ್ಲಿ ಭೂಮಿಗಾಗಿ ಆಹೋ ರಾತ್ರಿ ಧರಣಿ ನಡೆಸುತ್ತಿರುವ ದಲಿತರ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಂಡು ಧರಣಿ ಅಂತ್ಯಗೊಳಿಸಬೇಕು ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಪಿ.ಕೆ.ಬಸವರಾಜಪ್ಪ ಆಗ್ರಹಿಸಿದರು.
-ಪಿ.ಕೆ.ಬಸವರಾಜಪ್ಪ ಆಗ್ರಹ । 11ನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿ । ದಸಂಸಯಿಂದ ಪೊರಕೆ ಚಳುವಳಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕು ಕಚೇರಿ ಮುಂಭಾಗದಲ್ಲಿ ಭೂಮಿಗಾಗಿ ಆಹೋ ರಾತ್ರಿ ಧರಣಿ ನಡೆಸುತ್ತಿರುವ ದಲಿತರ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಂಡು ಧರಣಿ ಅಂತ್ಯಗೊಳಿಸಬೇಕು ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಪಿ.ಕೆ.ಬಸವರಾಜಪ್ಪ ಆಗ್ರಹಿಸಿದರು.
ಗುರುವಾರ ತಾಲೂಕು ಕಚೇರಿ ಮುಂಭಾಗ ದಸಂಸ ಭೂಮಿಗಾಗಿ ಆಹೋ ರಾತ್ರಿ ಧರಣಿ ನಡೆಸುತ್ತಿರುವ ಸ್ಥಳಕ್ಕೆಭೇಟಿ ನೀಡಿ ಮಾತನಾಡಿದರು. ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. 11 ದಿನಗಳು ಭೂಮಿಗಾಗಿ ದಲಿತ ಮುಖಂಡರು, ಮಹಿಳೆ ಯರು ಧರಣಿ ನಡೆಸಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾನೂನು ವ್ಯಾಪ್ತಿಯಲ್ಲಿ ದಲಿತರಿಗೆ ಭೂಮಿ ನೀಡುವ ಬಗ್ಗೆ ಸೂಕ್ತ ಉತ್ತರ ನೀಡಿ ಆಹೋ ರಾತ್ರಿ ಧರಣಿ ನಿಲ್ಲಿಸಲು ತಹಸೀಲ್ದಾರ್ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಮಾಳೂರು ದಿಣ್ಣೆ ವಿನಾಯಕ ಮಾತನಾಡಿ, ಅರಣ್ಯ ಇಲಾಖೆಗೆ ವರ್ಗಾವಣೆಗೊಂಡ ಸಾವಿರಾರು ಎಕರೆ ಕಂದಾಯ ಭೂಮಿಯಲ್ಲಿ ಕಾಡು ಬೆಳೆಸಲಾಗುತ್ತಿದೆ. ಜನರಿಗೆ ಕೃಷಿ ಮಾಡಲು ಭೂಮಿ ಇಲ್ಲ. ಅರಣ್ಯ ಇಲಾಖೆಗೆ ನೀಡಿದ ಭೂಮಿಯನ್ನು ವಾಪಾಸು ಕಂದಾಯ ಇಲಾಖೆಗೆ ಪಡೆಯಲು ಸರ್ಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ಲಭ್ಯವಿರುವ ಕಂದಾಯ ಭೂಮಿಯಲ್ಲಿ ಶೇ.50 ರಷ್ಟು ದಲಿತರಿಗೆ ಮೀಸಲಿಡಬೇಕು. ಕಂದಾಯ ಹಾಗೂ ಅರಣ್ಯ ಭೂಮಿ ಗುರುತಿಸಲು ಸರ್ಕಾರ ರಚಿಸಿರುವ ಎಸ್.ಐ.ಟಿಗೂ ದಲಿತರಿಗೆ ಭೂಮಿ ನೀಡುವುದಕ್ಕೂ ಸಂಬಂಧವಿಲ್ಲ. ಭೂ ರಹಿತ ದಲಿತರಿಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ಚಳುವಳಿ ನೇತೃತ್ವ ವಹಿಸಿದ್ದ ದಸಂಸ ರಾಜ್ಯ ಸಂಚಾಲಕ ತರೀಕೆರೆ ವೆಂಕಟೇಶ್ ಮಾತನಾಡಿ, ಭೂಮಿಗಾಗಿ ಹೋರಾಟ ಚಳುವಳಿಯನ್ನು ಹಲವಾರು ವರ್ಷಗಳಿಂದ ನಡೆಸುತ್ತಿದ್ದೇವೆ. ಕಾಫಿ ಬೆಳೆಗಾರರು ನೂರಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ, ದಲಿತರಿಗೆ ಭೂಮಿ ಇಲ್ಲ. ಇಂದು ಪೊರಕೆ ಚಳವಳಿ ನಡೆಸಿದ್ದೇವೆ. ಶುಕ್ರವಾರ ಅರೆ ಬೆತ್ತಲೆ ಹೋರಾಟ ಮಾಡುತ್ತೇವೆ.ಜಿಲ್ಲಾಧಿಕಾರಿ ಬಂದು ಬರವಣಿಗೆ ಮೂಲಕ ಆಶ್ವಾಸನೆ ನೀಡುವವರೆಗೂ ನಮ್ಮ ಚಳುವಳಿ ನಿಲ್ಲಲ್ಲ ಎಂದು ಘೋಷಿಸಿದರು.ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಮಿತಿ ಅಧ್ಯಕ್ಷ ಎಂ.ಎ.ಶಿಜು, ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಂ.ವಿ. ಭವಾನಿ, ಮುಖಂಡರಾದ ರಾಜೇಶ್, ಮೃತ್ಯಂಜಯ, ಜಯರಾಂ, ರವಿಕುಮಾರ್, ತಿಮ್ಮಯ್ಯ, ರೇಣುಕ,ಜಯಂತಿ ಇದ್ದರು.