ಪಟ್ಟಣದ ಹಾಸ್ಟಲ್ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಮಾ. ೧೮ ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ಗುರುವಾರ ಕೊರಟಗೆರೆ ತಾಲೂಕಿನ ವಿವಿಧ ಶಾಲೆ ಹಾಗೂ ಹಾಸ್ಟಲ್‌ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶುಭ ಕಲ್ಯಾಣ್ ಭೇಟಿ ನೀಡಿ ಊಟ ಸವಿದು ಪರಿಶೀಲಿಸಿ ಮೂಲಭೂತ ಸೌಕರ್ಯ, ಆಹಾರದ ಗುಣಮಟ್ಟ ಮತ್ತು ವಸತಿ ನಿಲಯದ ಪರಿಸರ ವೀಕ್ಷಿಸಿದರು. ವಸತಿ ನಿಲಯ ನಿರ್ವಹಣೆ ಉತ್ತಮವಾಗಿ ಕಂಡು ಬಂದ ಹಿನ್ನೆಲೆ ಮೇಲ್ವಿಚಾರಕರನ್ನು ಅಭಿನಂದಿಸಿದರು. ಇನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ನಂತರ ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ಉತ್ತಮ ರೀತಿಯಲ್ಲಿ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು. ಹಾಗೂ ಪೂರ್ವಸಿದ್ಧತೆ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಗತಿ ತೆಗೆದುಕೊಂಡು ಉತ್ತೀರ್ಣರಾಗುವಂತೆ ಕ್ರಮವಹಿಸಲು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು.

ಕೊರಟಗೆರೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕೋರ್ಟ್‌ಗೆ ಭೇಟಿ ನೀಡಿ ಕಾಮಗಾರಿ ಬೇಗ ಮುಗಿಸಿಬೇಕು. ಗೃಹ ಸಚಿವರು ಶೀಘ್ರದಲ್ಲೇ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸುವಂತೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ ಅನಂತರಾಮು, ಸಮಾಜ ಕಲ್ಯಾಣ ಇಲಾಖೆ ಯಮುನಾ, ಪಪಂ ಮುಖ್ಯಾಧಿಕಾರಿ ಉಮೇಶ್, ಸೇರಿ ಇತರರು ಇದ್ದರು.