ಜ.1ರಿಂದ ಜಾತ್ರಾಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತಿದೆಯಾದರೂ ಜ.5 ರಂದು ರಥೋತ್ಸವ ನಡೆಯಲಿದೆ
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಜ.1 ರಿಂದ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಲಕ್ಷ ಲಕ್ಷ ಭಕ್ತರು ಸೇರುವ ಹಿನ್ನೆಲೆಯಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಹಾಗೂ ಎಸ್ಪಿ ಡಾ. ರಾಮ ಎಲ್.ಅರಸಿದ್ದಿ ಖುದ್ದು ಪರಿಶೀಲನೆ ನಡೆಸಿದರಲ್ಲದೆ ಬಂದೋಬಸ್ತ್ ವ್ಯವಸ್ಥೆ ಸೇರಿದಂತೆ ಅತಿಥಿಗಳ ಕುರಿತು ಸ್ವಂತ ಶ್ರೀಗವಿಸಿದ್ಧೇಶ್ವರ ಶ್ರೀಗಳೊಂದಿಗೆ ಚರ್ಚೆ ನಡೆಸಿದರು.
ಜ.1ರಿಂದ ಜಾತ್ರಾಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತಿದೆಯಾದರೂ ಜ.5 ರಂದು ರಥೋತ್ಸವ ನಡೆಯಲಿದೆ. ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ 8-10 ಲಕ್ಷ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಾಹನಗಳ ನಿಯಂತ್ರಣ ಮತ್ತು ಆವರಣದಲ್ಲಿ ಬಿಗಿ ಕ್ರಮದ ಕುರಿತು ಚರ್ಚಿಸಲಾಯಿತು.ಜಿಲ್ಲಾಡಳಿತ ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಮಾಹಿತಿ ನೀಡಿದರು, ಎಸ್ಪಿ ಅವರು ಬಂದೋಬಸ್ತ್ ವ್ಯವಸ್ಥೆಯ ಕುರಿತು ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.
ಪಾರ್ಕಿಂಗ್ ವ್ಯವಸ್ಥೆಯನ್ನೇ ಪ್ರಮುಖವಾಗಿ ಚರ್ಚೆ ಮಾಡಲಾಯಿತು. ಅಲ್ಲದೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಿ, ಸಲಹೆ ಪಡೆಯಲಾಯಿತು.ಪರಿಶೀಲನೆ: ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಎಲ್ ಅರಸಿದ್ದಿ ಮಹಾದಾಸೋಹ ಮಂಟಪಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಂಗವಿಕಲರು, ಮಹಿಳೆಯರಿಗೆ ಪ್ರತ್ಯೇಕವಾಗಿ ಪ್ರವೇಶ ವ್ಯವಸ್ಥೆ ನೀಡಿದ ಹಿನ್ನೆಲೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯ ಇರುವ ಕುರಿತು ಸೂಚಿಸಲಾಯಿತು.
ಆಹಾರ ತಪಾಸಣೆ:ಲಕ್ಷ ಲಕ್ಷ ಭಕ್ತರು ಆಗಮಿಸುವ ಹಿನ್ನೆಲೆ ಪ್ರಸಾದ ವ್ಯವಸ್ಥೆ ಇದ್ದು ಹೀಗಾಗಿ,ಅದನ್ನು ಮೊದಲೇ ತಪಾಸಣೆಗೆ ಒಳಪಡಿಸುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸುವ ವ್ಯವಸ್ಥೆ ಪರಿಶೀಲಿಸಲಾಯಿತು.