ಗಲಾಟೆ ಪ್ರಕರಣಗಳು ಪುನರಾವರ್ತನೆಯಾದರೆ ಡೀಸಿ, ಎಸ್ಪಿ ನೇರ ಹೊಣೆ: ಚಲುವರಾಯಸ್ವಾಮಿ ಎಚ್ಚರಿಕೆ

| Published : Sep 13 2025, 02:04 AM IST

ಗಲಾಟೆ ಪ್ರಕರಣಗಳು ಪುನರಾವರ್ತನೆಯಾದರೆ ಡೀಸಿ, ಎಸ್ಪಿ ನೇರ ಹೊಣೆ: ಚಲುವರಾಯಸ್ವಾಮಿ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲುತೂರಾಟ ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದ ಕಾರಣ ಮದ್ದೂರು ಟೌನ್ ಇನ್ಸ್ ಪೆಕ್ಟರ್ ಶಿವಕುಮಾರ್ ಅಮಾನತ್ತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲೇ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಮದ್ದೂರಿನಂತಹ ಯಾವುದೇ ಗಲಾಟೆ ಪ್ರಕರಣಗಳು ಪುನರಾವರ್ತನೆಯಾದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲುತೂರಾಟ ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದ ಕಾರಣ ಮದ್ದೂರು ಟೌನ್ ಇನ್ಸ್ ಪೆಕ್ಟರ್ ಶಿವಕುಮಾರ್ ಅಮಾನತ್ತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲೇ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದರು.

ಜಿಲ್ಲೆಯಲ್ಲಿ ಇನ್ಮು ಮುಂದೆ ಇಂತಹ ಯಾವುದೇ ಘಟನೆ ಮರುಕಳಿಸಬಾರದು. ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಗಮನಹರಿಸಿ ಬಂದೋಬಸ್ತ್ ಮಾಡುವಂತೆ ಹೇಳಿದ್ದೇನೆ. ಒಂದು ವೇಳೆ ನಡೆದರೆ ಡಿಸಿ, ಎಸ್ಪಿ ಅವರನ್ನೇ ನೇರ ಹೊಣೆ ಮಾಡಲಾಗುವುದು ಎಂದರು.

ಮದ್ದೂರು ಘಟನೆಗೆ ಪೊಲೀಸ್ ವೈಫಲ್ಯ ಕಾರಣ ಎಂಬ ವಿಚಾರವಾಗಿ ಇನ್ನು ಯಾವುದೇ ವರದಿ ಬಂದಿಲ್ಲ. ಕಲ್ಲು ತೂರಾಟ ನಡೆಸಿದ 22 ಜನರನ್ನ ಬಂಧಿಸಲಾಗಿದೆ. ಘಟನೆಗೆ ಕಾರಣ ಏನು? ಯಾರು ಕಾರಣ ಅನ್ನೋ ಬಗ್ಗೆ ಇನ್ನು ವರದಿ ಬಂದಿಲ್ಲ. ವರದಿ ಬಂದ ನಂತರ ಆ ಬಗ್ಗೆ ಮಾಹಿತಿ ನೀಡುವೆ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ವರ್ಗಾವಣೆಗೂ ಮದ್ದೂರು ಗಲಭೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತಿಮ್ಮಯ್ಯ ಅವರು ಇರುವಷ್ಟು ದಿನಗಳು ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಅವಧಿ ಮುಗಿದಿತ್ತು. ಡಿಸೆಂಬರ್ ವರೆಗೂ ಮುಂದುವರೆಸಲು ನಾನೇ ಸರ್ಕಾರಕ್ಕೆ ಹೇಳಿದ್ದೆ. ಆದರೆ, ಸರ್ಕಾರದಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ. ಹೀಗಾಗಿ ಎಎಸ್ಪಿ ತಿಮ್ಮಯ್ಯ ಅವರ ವರ್ಗವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಮದ್ದೂರಿನ ಘಟನಾ ಸ್ಥಳಕ್ಕೆ ಗೃಹ ಸಚಿವ ಡಾ.ಪರಮೇಶ್ವರ್ ಬಾರದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಗೃಹ ಸಚಿವರು ನನ್ನಿಂದ ಎಲ್ಲಾ ಮಾಹಿತಿ ಪಡೆದಿದ್ದಾರೆ. ನಾನು ಅವರಿಗೆ ಇಲ್ಲಿನ ಘಟನೆ ಸಂಬಂಧ ಎಲ್ಲಾ ಮಾಹಿತಿ ನೀಡಿದ್ದೇನೆ. ನಿನ್ನೆ ಕ್ಯಾಬಿನೆಟ್ ನಲ್ಲೂ ಚರ್ಚೆ ನಡೆದು ಘಟನೆಯ ಮಾಹಿತಿ ವಿವರಿಸಿದ್ದೇನೆ ಎಂದರು.

ಪ್ರಕರಣದ ನಂತರ ನಾವು, ಜಿಲ್ಲಾಡಳಿತ ಎಲ್ಲವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಗೃಹ ಸಚಿವರು ಇಲ್ಲಿಗೆ ಬರುವ ಅವಶ್ಯಕತೆಯಿಲ್ಲ. ನಾನೇ ಬರೋದು ಬೇಡ ಅಂತಾ ಹೇಳಿದ್ದೇನೆ ಎಂದರು.

ಮದ್ದೂರಿನ ಘಟನೆ ನಂತರ ಬಿಜೆಪಿ ನಾಯಕರು ಬಂದಿದ್ದರು, ನಿನ್ನೆ ಬಿಜೆಪಿಯ ಪರ್ಯಾಯ ನಾಯಕರು ಬಂದಿದ್ದರು. ಅವರ ಹೋರಾಟ ಯಶಸ್ವಿಯಾಗಿದೆ. ಯತ್ನಾಳ್ ಮೊದಲು ಯಾವ ಪಾರ್ಟಿ ಅನ್ನೋದನ್ನು ಸ್ಪಷ್ಟಪಡಿಸಲಿ. ಅವರ ಹೊಸ ಪಕ್ಷಕ್ಕೆ ನಮ್ಮದು ಶುಭ ಹಾರೈಕೆ ಎಂದು ವ್ಯಂಗ್ಯವಾಡಿದರು.