ಸಾರಾಂಶ
ರಾಣಿಬೆನ್ನೂರು: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಬುಧವಾರ ನಗರದ ಮಿನಿ ವಿಧಾನಸೌಧ ಹಾಗೂ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಮಿನಿ ವಿಧಾನಸೌಧಕ್ಕೆ ತೆರಳಿದ ಜಿಲ್ಲಾಧಿಕಾರಿ ವಿವಿಧ ವಿಭಾಗಕ್ಕೆ ಭೇಟಿ ನೀಡಿ ಆಡಳಿತ ನಿರ್ವಹಣೆ ಬಗ್ಗೆ ಸಿಬ್ಬಂದಿ ಬಳಿ ಮಾಹಿತಿ ಪಡೆದುಕೊಂಡರು.ಮಿನಿ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿದ್ದನ್ನು ಕಂಡ ಜಿಲ್ಲಾಧಿಕಾರಿ ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್ ಮಾಡಿಸಲು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಸೂಚಿಸಿದರು.
ಆಹಾರ ಇಲಾಖೆ ಸಿಬ್ಬಂದಿ ಮೇಲೆ ಹರಿಹಾಯ್ದ ಡಿಸಿ: ಪಡಿತರ ಚೀಟಿ ವಿತರಣೆ ಕುರಿತು ಆಹಾರ ಇಲಾಖೆ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ವಿಚಾರಿಸಿದರು. ಆದರೆ ಸಿಬ್ಬಂದಿ ಬಳಿ ಸರಿಯಾದ ಮಾಹಿತಿ ಇರಲಿಲ್ಲ. ಪಡಿತರ ಚೀಟಿ ವಿತರಣೆ ಮಾಡುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಈ ವರೆಗೆ ಎಷ್ಟು ಜನರಿಗೆ ನೀಡಿದ್ದೀರಾ ಎಂದು ಪ್ರಶ್ನಿಸಿದರು. 650 ಜನರಿಗೆ ವಿತರಿಸಿದ್ದಾಗಿ ಸಿಬ್ಬಂದಿ ತಿಳಿಸಿದರು. ಇದರಿಂದ ಕೆಂಡಾಮಂಡಲವಾದ ಡಿಸಿ, ಇವರು ಮಾಡುವ ಕೆಲಸದಲ್ಲಿ ಕರ್ತವ್ಯಲೋಪ ಕಂಡ ಬಂದ ಕಾರಣ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ಪಾಟೀಲ ಅವರಿಗೆ ನೋಟಿಸ್ ನೀಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ ಆರ್.ಎಚ್. ಭಾಗವಾನ ಅವರಿಗೆ ಸೂಚಿಸಿದರು.ಹೊಸ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ: ಜಿಲ್ಲಾಧಿಕಾರಿ ಸಬ್ ರಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಅಪಾರ ಜನಸಂದಣಿ ಕಂಡು ಬಂದಿತು. ನಮ್ಮ ಕಚೇರಿ ಜಾಗ ಸಣ್ಣದಿದ್ದು ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿ ಜಾಗವಿದ್ದು, ನೀವು ಮಂಜೂರಾತಿ ನೀಡಿದಲ್ಲಿ ಕಟ್ಟಡ ನಿರ್ಮಿಸಬಹುದು ಹಾಗೂ ಇದರಿಂದ ಜನರಿಗೂ ಅನುಕೂಲವಾಗುತ್ತದೆ ಎಂದು ಸಬ್ ರಜಿಸ್ಟ್ರಾರ್ ವಿಶ್ವನಾಥ ಸುಬೇದಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಪ್ರಸ್ತಾವನೆ ಕಳುಹಿಸಿ ಕೊಡಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಬ್ ರಜಿಸ್ಟ್ರಾರ್ ಅವರಿಗೆ ಸೂಚಿಸಿದರು.
ನಗರಸಭೆಗೆ ಭೇಟಿ: ಆನಂತರ ನಗರಸಭೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಸಿಬ್ಬಂದಿ ಬಳಿ ಮಾಹಿತಿ ಪಡೆದುಕೊಂಡರಲ್ಲದೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡಿಕೊಡಲು ಹಾಗೂ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಸಲು ಬಂದವರಿಗೆ ಯಾವುದೇ ಆದ್ಯತೆ ನೀಡಬಾರದು ಎಂದು ಪೌರಾಯುಕ್ತರಾದ ಎಫ್.ಐ. ಇಂಗಳಗಿ ಅವರಿಗೆ ತಿಳಿಸಿದರು. ಇದಾದ ಮೇಲೆ ನಗರಸಭೆಯ ಕಂದಾಯ ಇಲಾಖೆ, ಕುಡಿಯುವ ನೀರು ವಿಭಾಗ, ಕಟ್ಟಡ ಪರವಾನಗಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸದಸ್ಯರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ: ನಗರಸಭೆಯ ಸದಸ್ಯರ ಜತೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು. ನಗರದಲ್ಲಿ ಸಂಚಾರ ದಟ್ಟಣೆ, ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಬಗ್ಗೆ ಅಧಿಕಾರಿಗಳ ಗಮನ ವಹಿಸಬೇಕು ಎಂದು ಸದಸ್ಯರು ಜಿಲ್ಲಾಧಿಕಾರಿಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ನಗರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸದಸ್ಯರಿಗೆ ಮನವಿ ಮಾಡಿದರು.
ತಹಸೀಲ್ದಾರ ಆರ್.ಎಚ್. ಭಾಗವಾನ, ಪೌರಾಯುಕ್ತ ಎಫ್.ಐ. ಇಂಗಳಗಿ, ಕಂದಾಯ ವೃತ್ತ ನಿರೀಕ್ಷಕ ಅಶೋಕ ಅರಳೇಶ್ವರ, ವಾಗೀಶ ಮಳೇಮಠ, ಗ್ರಾಮ ಆಡಳಿತಾಧಿಕಾರಿ ಹರೀಶ, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.