ಜಿಲ್ಲಾಸ್ಪತ್ರೆಗೆ ಡಿಸಿ ಭೇಟಿ, ಪರಿಶೀಲನೆ

| Published : May 27 2024, 01:00 AM IST

ಸಾರಾಂಶ

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ, ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ, ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯಲ್ಲಿನ ಒಪಿಡಿ, ಆಪರೇಶನ್ ಥೀಯೆಟರ್, ಚಿಕ್ಕಮಕ್ಕಳ ವಿಭಾಗ, ಮೆಡಿಸಿನ್ ವ್ಯವಸ್ಥೆ, ಸರ್ಜರಿ ವಿಭಾಗ, ಅರ್ಥೋಪೆಡಿಕ್, ಕಣ್ಣಿನ ವಿಭಾಗ, ಇಎನ್‌ಟಿ ವಿಭಾಗ, ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಸ್ವಚ್ಛತೆ ಹಾಗೂ ನಿರ್ವಹಣೆ ಬಗ್ಗೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಅವರು, ಮಕ್ಕಳ ವಿಭಾಗ, ಹೆರಿಗೆ ವಿಭಾಗಗಳಲ್ಲಿ ಕಷ್ಟಕರವಾದ ಚಿಕಿತ್ಸೆಗಳನ್ನು ಮಾಡಿದ ಹಾಗೂ ಪರಿಹರಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.

ಹೊಸದಾಗಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳುಳ್ಳ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಲ್ಲಿ ಭೇಟಿ ನೀಡಿ ಆದಷ್ಟು ಬೇಗ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಡಿಎನ್‌ಬಿಯ ತರಬೇತಿಯಲ್ಲಿ 35 ಜನ ವಿದ್ಯಾರ್ಥಿಗಳಿದ್ದು, ಅವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಹೋರ ರೋಗಿಗಳ ವಿಭಾಗದಲ್ಲಿ ಸರತಿ ಸಾಲನ್ನು ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಅಭಾ ಆ್ಯಪ್‌ ಮೂಲಕ ನೋಂದಣಿ ಮಾಡುವ ಕಾರ್ಯವೈಖರಿಯನ್ನು ಪರಿಶೀಲಿಸಿ ಸ್ವತಃ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದರ ಕಾರ್ಯವೈಖರಿ ಪರಿಶೀಲಿಸಿದರು.

ಜಿಲ್ಲಾಸ್ಪತ್ರೆಯಲ್ಲಿರುವ ಅಡುಗೆ ಕೋಣೆಗೆ ಭೇಟಿ ನೀಡಿ ಅಲ್ಲಿ ಅಡುಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಿ ಹೊಸದಾಗಿ ರೊಟ್ಟಿ ಮಾಡುವ ಯಂತ್ರವನ್ನು ವಿಕ್ಷೀಸಿದರು. ಈ ಯಂತ್ರವು ಗಂಟೆಗೆ 500 ರೊಟ್ಟಿಗಳನ್ನು ಮಾಡುತ್ತದೆ. ಈ ಯಂತ್ರವನ್ನು ಆಸ್ಪತ್ರೆಯ ವೈದ್ಯರು ಹಾಗೂ ಕೆಲವು ಎನ್‌ಜಿಒಗಳ ಸಹಕಾರದಲ್ಲಿ ಖರೀದಿ ಮಾಡಿದ್ದು, ಇದರಿಂದ ಆಸ್ಪತ್ರೆಗೆ ದಾಖಲಾಗುವ ಒಳ ರೋಗಿಗಳ ಊಟೋಪಚಾರದ ವ್ಯವಸ್ಥೆಗಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ವಿವರಿಸಿದರು.

ಈ ವೇಳೆ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.