- ರೈತರ ಅಹವಾಲು ಸ್ವೀಕಾರ । ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದ ಗಂಗಾಧರ ಸ್ವಾಮಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಏತ ನೀರಾವರಿ ಯೋಜನೆ ಕಾಲುವೆಯ ಕೊನೆ ಭಾಗದ ಪ್ರದೇಶಗಳಾದ ಭಾನುವಳ್ಳಿ, ನಂದಿತಾವರೆ, ಕಮಲಾಪುರ, ಕಡರನಾಯಕನಹಳ್ಳಿ ಹಾಗೂ ಹೊಳೆಸಿರಿಗೆರೆ ಗ್ರಾಮಗಳ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಖುದ್ದಾಗಿ ಭೇಟಿ ನೀಡಿ, ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಬುಧವಾರ ಭದ್ರಾ ಕಾಲುವೆ ಕೊನೆ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ, ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ನೀರಿನ ಹಂಚಿಕೆ ಹಾಗೂ ಕಾಲುವೆ ನಿರ್ವಹಣೆಯ ಕುರಿತು ಅಹವಾಲುಗಳನ್ನು ಆಲಿಸಿದರು.


ಕಾಲುವೆಯ ಕೊನೆಯ ತುದಿಯವರೆಗೂ ನೀರು ಸರಾಗವಾಗಿ ಹರಿಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಜಿಲ್ಲಾಧಿಕಾರಿ ಖುದ್ದು ಪರಿಶೀಲಿಸಿದರು. ಈ ಭಾಗದ ರೈತರು ಎದುರಿಸುತ್ತಿರುವ ನೀರಿನ ಅಭಾವದ ಕುರಿತು ವಾಸ್ತವಿಕ ಸ್ಥಿತಿ ಅವಲೋಕಿಸಿದರು. ಭತ್ತದ ಬೆಳೆ ಸಮೃದ್ಧವಾಗಿ ಬೆಳೆಯಲು ಕಾಲುವೆಯಲ್ಲಿ ನಿಗದಿತ ಪ್ರಮಾಣದ ನೀರು ಹರಿಯುವುದು ಅವಶ್ಯಕವಾಗಿದೆ. ಆಯಾ ಭಾಗದ ರೈತರಿಗೆ ತೊಂದರೆ ಆಗದಂತೆ ನೀರು ನಿರ್ವಹಣೆ ಮಾಡುವಂತೆ ರೈತರು ಮನವಿ ಮಾಡಿದರು.

ಸ್ಥಳದಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಕಾಲುವೆ ಕೊನೆ ಭಾಗದ ರೈತರಿಗೂ ನ್ಯಾಯಯುತವಾಗಿ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಯಾವುದೇ ಅಡೆತಡೆಗಳಿದ್ದಲ್ಲಿ ತಕ್ಷಣವೇ ಸರಿಪಡಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೀರಾವರಿ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.

- - -

-13ಕೆಡಿವಿಜಿ33, 34:

ಭದ್ರಾ ಕಾಲುವೆಯ ಕೊನೆ ಹಂತದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು.