4ನೇ ಹಂತದ ಕೆರೆಗಳಿಗೆ ನೀರು ತುಂಬಿಸಲಿ ಹಾಗೂ ಸಾಗುವಳಿ ನೀಡುವ ಸಂಬಂಧ ತುರ್ತಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸುತ್ತೇನೆ. ಪ್ರತಿಭಟನೆ ನಿಲ್ಲಿಸಿ ಎಂದು ಜಿಲ್ಲಾಧಿಕಾರಿ ಶ್ರೀರೂಪ ಪ್ರತಿಭಟನಾನಿರತ ರೈತಸಂಘದ ಕಾರ್ಯಕರ್ತರಿಗೆ ಮನವಿ ಮಾಡಿದರೂ 2 ಬೇಡಿಕೆ ಈಡೇರುವ ತನಕ ಪ್ರತಿಭಟನೆ ಮುಂದುವರಿಸಲು ಪ್ರತಿಭಟನಾನಿರತರು ನಿರ್ಧರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
4ನೇ ಹಂತದ ಕೆರೆಗಳಿಗೆ ನೀರು ತುಂಬಿಸಲಿ ಹಾಗೂ ಸಾಗುವಳಿ ನೀಡುವ ಸಂಬಂಧ ತುರ್ತಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸುತ್ತೇನೆ. ಪ್ರತಿಭಟನೆ ನಿಲ್ಲಿಸಿ ಎಂದು ಜಿಲ್ಲಾಧಿಕಾರಿ ಶ್ರೀರೂಪ ಪ್ರತಿಭಟನಾನಿರತ ರೈತಸಂಘದ ಕಾರ್ಯಕರ್ತರಿಗೆ ಮನವಿ ಮಾಡಿದರೂ 2 ಬೇಡಿಕೆ ಈಡೇರುವ ತನಕ ಪ್ರತಿಭಟನೆ ಮುಂದುವರಿಸಲು ಪ್ರತಿಭಟನಾನಿರತರು ನಿರ್ಧರಿಸಿದ್ದಾರೆ.ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಆವರಣದಲ್ಲಿ ಕಳೆದ 16 ದಿನಗಳಿಂದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ಸಂಜೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀರೂಪ ಮೊದಲಿಗೆ ರೈತರ ಎರಡು ಬೇಡಿಕೆ ಆಲಿಸಿದರು.
ಪ್ರತಿಭಟನಾಕಾರರು 4ನೇ ಹಂತದ ಕೆರೆಗಳಿಗೆ ನೀರು ಹರಿಸಬೇಕು. ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿದ ಬಳಿಕ ಜಿಲ್ಲಾಧಿಕಾರಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಅತೀ ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆಯಲ್ಲಿ ಸಭೆ ಕರೆದು ತೀರ್ಮಾನ ಮಾಡಲಾಗುತ್ತದೆ ಎಂದರು.ಅಲ್ಲದೆ ಸಾಗುವಳಿ ಚೀಟಿ ಸಂಬಂಧ ಬರುವ ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಸಭೆ ಕರೆದು ಸಾಗುವಳಿ ಚೀಟಿ ನೀಡುವ ಸಂಬಂಧ ಚರ್ಚಿಸಲಾಗುವುದು.1,2,3 ಹಾಗೂ 4 ನೇ ಹಂತದ ಕೆರೆಗಳಿಗೆ ಒಂದೇ ಸಮಯದಲ್ಲಿ ನೀರು ಹರಿಸಲು 50 ಕೋಟಿ ವೆಚ್ಚದಲ್ಲಿ ಮೋಟರ್ ಹಾಗೂ ಸ್ಪೇರ್ ಸ್ಪಾಟ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುತ್ತೂರು ಕೆರೆಯಿಂದ ಅಮಚವಾಡಿ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಮಾತಿಗೆ ಪ್ರತಿಕ್ರಿಯಿಸಿದ ರೈತಸಂಘದ ಪ್ರತಿಭಟನಾಕಾರರು, ನಿಮ್ಮ ಭರವಸೆಗೆ ರೈತರು ಮಣಿಯುವುದಿಲ್ಲ.ಮೊದಲು ಸಭೆ ಕರೆಯಿರಿ,ಕೆರೆಗೆ ನೀರು ಬಿಡಿಸಿ, ಅಲ್ಲಿಯ ತನಕ ಪ್ರತಿಭಟನೆ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.ಪ್ರತಿಭಟನಾಕಾರರ ಮನವೊಲಿಯದ ಕಾರಣ ಜಿಲ್ಲಾಧಿಕಾರಿ ಶ್ರೀರೂಪ ವಾಪಸ್ ತೆರಳಿದರು. ಜಿಲ್ಲಾಧಿಕಾರಿ ಜತೆ ತಹಸೀಲ್ದಾರ್ ಎಂ.ಎಸ್.ತನ್ಮಯ್, ಎಸಿಎಫ್ ಕೆ.ಸುರೇಶ್, ಎಎಸ್ಪಿ ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ಇದ್ದರು.
ನೀರಿನ ವಿಚಾರ ತಾರ್ಕಿಕ ಅಂತ್ಯವರೆಗೆ ಪ್ರತಿಭಟನೆ ನಿಲ್ಲಲ್ಲ:ಪ್ರತಿಭಟನಾಕಾರರ ಮನವೊಲಿಸಲು ಜಿಲ್ಲಾಧಿಕಾರಿ ಶ್ರೀರೂಪ ಪ್ರಯತ್ನ ಪಟ್ಟಿದ್ದಾರೆ. ಆದರೆ ರೈತರ ಪ್ರಮುಖ ಬೇಡಿಕೆಗಳಾದ ಕೆರೆಗೆ ನೀರು,ಸಾಗುವಳಿ ಚೀಟಿ ವಿಚಾರ ತಾರ್ಕಿಕ ಅಂತ್ಯ ಕಾಣುವ ತನಕ ಪ್ರತಿಭಟನೆ ನಿಲ್ಲಲ್ಲ,ಸದ್ಯದಲ್ಲೇ ಬೃಹತ್ ಪ್ರತಿಭಟನೆ ನಡೆಸಲು ಜಿಲ್ಲಾ ಹಾಗೂ ತಾಲೂಕು ರೈತಸಂಘದ ಘಟಕಗಳು ನಿರ್ಧರಿಸಿವೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ರೈತಸಂಘದ ಮಾತುಕತೆ ವಿಫಲವಾದ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಭೇಟಿ ನೀಡಿದ್ರು,ಮಾತುಕತೆ ವಿಫಲವಾಗಿದೆ.ಆದರೆ ನೀರು ಹಾಗೂ ಸಾಗುವಳಿ ಚೀಟಿ ವಿತರಿಸುವ ತನಕ ಪ್ರತಿಭಟನೆ ನಡೆಯಲಿದೆ ಎಂದರು.ಬೃಹತ್ ಪ್ರತಿಭಟನೆ:
ರೈತರ ಪ್ರಮುಖ ಎರಡು ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಈ ಕಾರಣದಿಂದ ಸದ್ಯದಲ್ಲೇ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ಹೇಳಿದ್ದಾರೆ.ಈ ಬಗ್ಗೆ ಚರ್ಚಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ,ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ,ಮುಖಂಡರಾದ ಹೊಸಕೋಟೆ ಬಸವರಾಜು, ನೇತ್ರ, ಮಹೇಶ್ ಕುಮಾರ್, ಶಿವಣ್ಣ, ಮೂಡ್ನಾಕೂಡು ಮಹೇಶ್, ಪ್ರಭು, ಪ್ರವೀಣ್, ನಾಗರಾಜಪ್ಪ, ಬಸಮ್ಮ, ಸೋಮಶೇಖರ್, ಚಿಕ್ಕತಾಯಮ್ಮ, ನೂರಾರು ಮಂದಿ ಇದ್ದರು.
ತೆರಕಣಾಂಬಿ ಹುಂಡೀಲಿ ಪ್ರತಿಭಟನೆಗುಂಡ್ಲುಪೇಟೆಯ ಆಲಂಬೂರು 3 ನೇ ಹಂತದ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ತೆರಕಣಾಂಬಿ ಹುಂಡಿ ಬಳಿ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ ನೀಡಿದ್ದರು.
ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ಕರೆದು ನೀರಿನ ಸಮಸ್ಯೆಗೆ ಮುಕ್ತಿ ನೀಡುತ್ತೇನೆ,ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿದರೂ ಪ್ರತಿಭಟನಾ ನಿರತ ರೈತರು ಮಾತ್ರ ಕೆರೆಗೆ ನೀರು ಬಿಡುವ ತನಕ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದ್ದಾರೆ.